Home ಸುದ್ದಿ ಅಂತರಾಷ್ಟ್ರೀಯ ಪೈಲಟ್‍ಗಳನ್ನು ಬಿಡುಗಡೆಗೆ ಇರಾನ್ ಒತ್ತಾಯ: ಬಂಧನ ನಿರಾಕರಿಸಿದ ಕತಾರ್

ಪೈಲಟ್‍ಗಳನ್ನು ಬಿಡುಗಡೆಗೆ ಇರಾನ್ ಒತ್ತಾಯ: ಬಂಧನ ನಿರಾಕರಿಸಿದ ಕತಾರ್

ಟಿಹ್ರಾನ್,ಆ16:ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿದೆ. ಇತ್ತೀಚೆಗೆ ಪತನಗೊಂಡ ಇರಾನ್‍ನ ಸುಖೋಯ್ Su-24 ಯುದ್ಧ ವಿಮಾನದಲ್ಲಿದ್ದ ಮೂವರು ಇರಾನಿ ಪೈಲಟ್‍ಗಳನ್ನು ಬಂಧನದಲ್ಲಿರಿಸಿಕೊಳ್ಳಲಾಗಿದೆ ಎಂದು ಇರಾನ್ ಸೇನೆ ಆರೋಪಿಸಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕತಾರ್ ಸರ್ಕಾರವನ್ನು ಒತ್ತಾಯಿಸಿದೆ. ಆದರೆ, ಈ ಆರೋಪವನ್ನು ಕತಾರ್ ಸಂಪೂರ್ಣವಾಗಿ ನಿರಾಕರಿಸಿದೆ.


ಇರಾನ್ ಸಶಸ್ತ್ರ ಪಡೆಗಳ ಜನರಲ್ ಮೊಹಮ್ಮದ್ ಬಾಗೇರ್‍ಜಾದೆ ಅವರು ನೀಡಿರುವ ಹೇಳಿಕೆಯ ಪ್ರಕಾರ, ಯುದ್ಧದ ಆರಂಭಿಕ ಹಂತದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಸುಖೋಯ್ Su-24 ವಿಮಾನ ಪತನಗೊಂಡಿತ್ತು. ವಿಮಾನದಲ್ಲಿದ್ದ ಇರಾನಿ ಪೈಲಟ್‍ಗಳಾದ ಜಾವಾದ್ ಸಲೇಹಿ, ಅಬ್ದುಲ್ ಮಜೀದ್ ದಷ್ಟಿಯಾನ್ ಮತ್ತು ಓಮ್ರಾನ್ ಬೆಹ್ರಾವೇಶಿಯನ್ ಅವರನ್ನು ಕತಾರ್ ಪಡೆಗಳು ಜೀವಂತವಾಗಿ ವಶಕ್ಕೆ ಪಡೆದುಕೊಂಡಿದ್ದು, ಕಳೆದ ಆರು ತಿಂಗಳಿನಿಂದ ಬಂಧನದಲ್ಲಿರಿಸಿಕೊಂಡಿವೆ ಎಂದು ಇರಾನ್ ಫಾರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಕುರಿತು ಇರಾನ್, ರೆಡ್ ಕ್ರಾಸ್ ಅಂತಾರಾಷ್ಟ್ರೀಯ ಸಮಿತಿಗೆ (Iಅಖಅ) ಪತ್ರ ಬರೆದು ಪೈಲಟ್‍ಗಳ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದೆ.


ಇನ್ನೊಂದೆಡೆ, ಇರಾನ್‍ನ ಈ ಆರೋಪಗಳನ್ನು ಕತಾರ್ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಮಾಜೆದ್ ಮೊಹಮ್ಮದ್ ಅಲ್-ಅನ್ಸಾರಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇರಾನಿ ಪೈಲಟ್‍ಗಳು ಕತಾರ್ ವಾಯುಪ್ರದೇಶವನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಸಂಪರ್ಕ ಸಾಧಿಸಲಾಗಿತ್ತು ಹಾಗೂ ಅವರ ಗಡಿ ಉಲ್ಲಂಘನೆಯನ್ನು ದೃಢೀಕರಿಸಲಾಗಿತ್ತು. ಆದರೆ ಯಾವುದೇ ಪೈಲಟ್‍ಗಳನ್ನು ಕತಾರ್ ಬಂಧನದಲ್ಲಿರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಈ ಸೂಕ್ಷ್ಮ ಸಮಯದಲ್ಲಿ ಇಂತಹ ದಾರಿತಪ್ಪಿಸುವ ಹೇಳಿಕೆಗಳು ಬಂದಿರುವುದು ಆಶ್ಚರ್ಯಕರವಾಗಿದೆ ಎಂದು ಕತಾರ್ ಹೇಳಿದೆ.
ದಕ್ಷಿಣ ಲೆಬನಾನ್‍ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂರು ಮಕ್ಕಳು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಹೆಜ್ಬೊಲ್ಲಾ ಕಮಾಂಡರ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.