Home ಜಿಲ್ಲೆ ಮಂಗಳೂರು ಪೆರ್ಡೂರು ಸಂಜೀವಿನಿ ಒಕ್ಕೂಟದಲ್ಲಿ ೨೩ ಲಕ್ಷ ವಂಚನೆ: ದಂಪತಿ ಬಂಧನ

ಪೆರ್ಡೂರು ಸಂಜೀವಿನಿ ಒಕ್ಕೂಟದಲ್ಲಿ ೨೩ ಲಕ್ಷ ವಂಚನೆ: ದಂಪತಿ ಬಂಧನ

ಉಡುಪಿ, ಜು.೬: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ(ರಿ)ದಲ್ಲಿ ?೨೩ ಲಕ್ಷ ಹಣ ದುರ್ಬಳಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ಇಬ್ಬರನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿದ್ದ ಸುಗಂಧಿ ಹಾಗೂ ಅವರ ಪತಿ ಸಂತೋಷ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸುಗಂಧಿ ಅವರು ೨೦೨೩ರಿಂದ ೨೦೨೫ರವರೆಗೆ ಸಾಲ ಮರುಪಾವತಿ ಮೊತ್ತವನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿ, ಅದನ್ನು ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ದುರ್ಬಳಕೆ ಮಾಡಿರುವ ಆರೋಪ ಇದೆ. ಅಲ್ಲದೆ, ವಿವಿಧ ಸಂಘಗಳ ಹೆಸರಿನಲ್ಲಿ ಒಕ್ಕೂಟದ ಚೆಕ್‌ಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ನಕಲಿ ಸಹಿಗಳನ್ನು ಮಾಡಿ ಬ್ಯಾಂಕ್‌ನಿಂದ ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, ಲೆಕ್ಕಪರಿಶೋಧನೆ ವೇಳೆ ಅನುಮಾನ ಮೂಡದಂತೆ ಬೇರೆ ಸದಸ್ಯರಿಗೆ ತೋರಿಸಲು ಪ್ರತ್ಯೇಕ ಸಾಲದ ಖಾತೆ ಪುಸ್ತಕಗಳನ್ನು ಸಿದ್ಧಪಡಿಸಿ, ಕಾರ್ಯಕಾರಿ ಸಮಿತಿಗೂ ವಂಚನೆ ಎಸಗುವ ರೀತಿಯಲ್ಲಿ ಬೇರೆ ಬೇರೆ ದಾಖಲೆಗಳನ್ನು ನಿರ್ವಹಿಸಿದ್ದರೆಂದು ಆರೋಪಿಸಲಾಗಿದೆ. ಈ ಮೂಲಕ ಒಟ್ಟು ?೨೩ ಲಕ್ಷ ಹಣವನ್ನು ಸ್ವಂತ ಬಳಕೆಗೆ ದುರ್ಬಳಕೆ ಮಾಡಿಕೊಂಡಿರುವುದಾಗಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೩೯/೨೦೨೬ರಡಿ ಭಾರತೀಯ ನ್ಯಾಯ ಸಂಹಿತೆ (ಃಓS) ಕಲಂ ೩೧೬(೪), ೩೧೮, ೩೩೬(೩) ಹಾಗೂ ೩೪೦(೨) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನ ಹಾಗೂ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ಹಿರಿಯಡಕ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಪುನೀತ್ ಕುಮಾರ್ ಬಿ.ಇ. ಮತ್ತು ವಿಠ್ಠಲ ಮಲವಡಕರ ನೇತೃತ್ವದ ತಂಡವು ಜುಲೈ ೬ರಂದು ಆರೋಪಿಗಳಾದ ಸುಗಂಧಿ ಹಾಗೂ ಸಂತೋಷರನ್ನು ವಶಕ್ಕೆ ಪಡೆದು ಬಂಧಿಸಿ ವಿಚಾರಣೆ ನಡೆಸಿದೆ.
ಪ್ರಾಥಮಿಕ ತನಿಖೆಯಲ್ಲಿ ಸುಗಂಧಿ ಹಾಗೂ ಅವರ ಪತಿ ಸಂತೋಷ ಸೇರಿಕೊಂಡು ಸಂಘದ ವಿವಿಧ ಸದಸ್ಯರ ಹೆಸರಲ್ಲಿ ನಕಲಿ ಸಹಿ ಹಾಗೂ ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣದ ಕುರಿತು ಹಿರಿಯಡಕ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.