
ಸುಳ್ಯ:ಮೂರು ತಾಲೂಕುಗಳ ೨೨ ಗ್ರಾಮಗಳ ಮಾಗಣೆ ಕ್ಷೇತ್ರವೆಂಬ ಹೆಗ್ಗಳಿಕೆ ಹೊಂದಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಜಲದುರ್ಗಾದೇವಿ ವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಶುಕ್ರವಾರ ನಡೆದ ವರಮಹಾಲಕ್ಷ್ಮೀ ಪೂಜೆಯಲ್ಲಿ ೧,೦೦೦ಕ್ಕೂ ಅಧಿಕ ಮಂದಿ ಪೂಜೆ ಸಮರ್ಪಿಸಿದರು.
ಪೂರ್ವಾಹ್ನ ದೇವಸ್ಥಾನದ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮ ಆರಂಭಗೊಂಡಿತು. ಮಾತೆಯರು ಪಾಲ್ಗೊಂಡು ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ದೇವಿಯನ್ನು ಆರಾಧಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು. ಪೂಜೆಯ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಹಾಗೂ ಅರ್ಚನೆ ನೆರವೇರಿಸಲಾಯಿತು.
ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಕುಟುಂಬದ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಹಾಗೂ ಸಕಲ ಇಷ್ಟಾರ್ಥಗಳ ಈಡೇರಿಕೆಗಾಗಿ ಮಾತೆಯರು ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಪಾಲ್ಗೊಂಡ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಪೆರುವಾಜೆ ಶ್ರೀ ಜಲದುರ್ಗಾದೇವಿ ಕ್ಷೇತ್ರವು ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ೨೨ ಗ್ರಾಮಗಳ ಮಾಗಣೆ ಕ್ಷೇತ್ರವಾಗಿದ್ದು, ಈ ಭಾಗದ ಜನರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕಿನೊಂದಿಗೆ ನಿಕಟ ಸಂಬಂಧ ಹೊಂದಿದೆ. ವಿವಿಧ ಗ್ರಾಮಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವಿಯ ಆರಾಧನೆಯಲ್ಲಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆ.
ವರಮಹಾಲಕ್ಷ್ಮೀ ಪೂಜೆಗೆ ಮುನ್ನವೇ ದೇವಸ್ಥಾನದಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು ಆಗಮಿಸಿದ್ದರಿಂದ ದೇವಸ್ಥಾನದ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪೂಜಾ ಸಮಿತಿಯ ಪದಾಧಿಕಾರಿಗಳು, ದೇವಸ್ಥಾನದ ಆಡಳಿತ ವರ್ಗ ಹಾಗೂ ಸ್ವಯಂಸೇವಕರು ಕಾರ್ಯಕ್ರಮದ ವ್ಯವಸ್ಥೆಗಳನ್ನು ನಿರ್ವಹಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆಗುತ್ತು, ಸಮಿತಿ ಸದಸ್ಯರು, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಪೂರ್ಣಿಮ ಕೊಂಡೆಪ್ಪಾಡಿ, ಕಾರ್ಯದರ್ಶಿ ಸವಿತಾ ಪೆರುವಾಜೆ, ಖಜಾಂಚಿ ಸುಶೀಲ ಪೆರುವಾಜೆ , ಪೂಜಾ ಸಮಿತಿ ಸದಸ್ಯರಾದ ಅನುಸೂಯ ಪೆರುವಾಜೆ, ವನಿತಾ ಸಾರಕರೆ, ವಾಣಿಶ್ರೀ ಬೆಳ್ಳಾರೆ, ನಿರ್ಮಲ ರೈ ಕೆಡೆಂಜಿಮೊಗ್ರು, ಚಂದ್ರಕಲಾ ಪೆರುವಾಜೆ, ಶಕುಂತಳಾ ಪೆರುವಾಜೆ, ರೇಣುಕಾ ಪೆರುವಾಜೆ, ಸುಜಾತ ಪಿ. ಶೆಟ್ಟಿ, ರೇಖಾ ಮರಿಕೇಯಿ, ವೀಣಾ ಕೊಲ್ಯ, ಪೂರ್ಣಿಮ ಉಮೇಶ್ ಪೆರುವಾಜೆ, ವೇದಾವತಿ ಪೆರುವಾಜೆ, ದಿವ್ಯ ಉಮಿಕ್ಕಳ, ರೂಪ ರೈ ಕೆಡೆಂಜಿಮೊಗ್ರು, ಪ್ರೇಮಾ ಕೊಲ್ಯ, ಸುಲೋಚನಾ ಪಾಜಪಳ್ಳ ಹಾಗೂ ಸುಲೋಚನಾ ಕೊಳಂಬಳ ಉಪಸ್ಥಿತರಿದ್ದರು.


































