ಪೂಜೆಗಷ್ಟೇ ಸೀಮಿತವಾದ ಮುಡುಕುತೊರೆ ಜಾತ್ರೋತ್ಸವ: ಸಚಿವ ಡಾ.ಎಚ್.ಸಿ.ಮಹದೇವಪ್ಪ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಡಿ.30:-
ಸ್ವಚ್ಚತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ನೂತನ ವರ್ಷ ಜ. 21 ರಿಂದ ಆರಂಭವಾಗಲಿರುವ ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಹಾಗು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಮುಡುಕುತೊರೆಯ ಜೆ.ಎಸ್.ಎಸ್ ಕಲ್ಯಾಣ ಮಂಟಪದಲ್ಲಿ ಮುಡುಕುತೊರೆ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯು ತಾಲೂಕಿನಲ್ಲಿಯೇ ಪ್ರಮುಖವಾದ ಪ್ರಸಿದ್ದ ಜಾತ್ರೆಯಾಗಿರುವುದರಿಂದ ಜಾನುವಾರು ಹಾಗು ರಥೋತ್ಸವ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಭಕ್ತಾಧಿಗಳು ಬರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.


ಪ್ರಸಿದ್ದ ಜಾತ್ರೆ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ,ಶುದ್ಧ ಕುಡಿಯುವ ನೀರು,ವಿದ್ಯುತ್,ಮಹಿಳೆಯರಿಗೆ ಬಟ್ಟೆ ಬದಲಿಸುವ ಕೇಂದ್ರಗಳು ಸೇರಿದಂತೆ ಮತ್ತಿತರೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕೆಂದು ಸೂಚಿಸಿದರು.ಈ ಬಾರಿ ಜಾತ್ರೆಯು ಜನವರಿ 21 ರಿಂದ 30 ರವರೆಗೆ 9 ದಿನಗಳ ನಡೆಯಲಿದ್ದು,ಕಳೆದ ಬಾರಿ ಜಾತ್ರೆಯ ವೆಚ್ಚಕ್ಕೆ 19 ಲಕ್ಷ ವೆಚ್ಚವಾಗಿದ್ದು ಅಧಿಕಾರಿಗಳ ಮಾಹಿತಿ ಅನ್ವಯ ಈ ಬಾರಿ 21 ಲಕ್ಷ ರೂ.ಗಳ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದರು.


ಜಾನುವಾರು ಜಾತ್ರೆ ಸಹ ವಿಶೇಷತೆ ಪಡೆದಿದ್ದು ಸಾವಿರಾರು ಸಂಖ್ಯೆಯ ಜಾನುವಾರುಗಳು ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಪಶುವೈದ್ಯ ಇಲಾಖೆಯು ಜಾನುವಾರುಗಳಿಗೆ ಸಾಂಕ್ರಮಿಕ ರೋಗ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ,ವಿದ್ಯುತ್ ಇಲಾಖೆಯು ಜಾತ್ರೆ ಆರಂಭದಿಂದ ಜಾತ್ರೆ ಮುಗಿಯುವವರೆಗೂ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕು,ರಾಮಸ್ವಾಮಿ ನಾಲೆಗೆ ನೀರು ಬಿಡಲು ನೀರಾವರಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು, ಜಾತ್ರೆಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದು ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಆರೋಗ್ಯ ಇಲಾಖೆ ಹಾಗು ಜಾತ್ರೆಗೆ ಬರುವ ಜನ ದಟ್ಟಣೆಯನ್ನು ನಿಯಂತ್ರಿಸಲು ಪೆÇೀಲೀಸ್ ಇಲಾಖೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು.ಆ ಮೂಲಕ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಣ್ಗಾವಲು ಹಾಕಬೇಕು ಎಂದು ಸಚಿವರು ಸೂಚನೆ ನೀಡಿದರು.


ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ ಸಚಿವರು,ಈಗಾಗಲೇ ವಸತಿ ಶಾಲೆ ನಿರ್ಮಾಣ, ಏತ ನೀರಾವರಿ ಯೋಜನೆ, ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಲಾಗಿದೆ ಎಂದರು.


ಸಭೆಯಲ್ಲಿ ತಲಕಾಡು ವೈಧ್ಯನಾಥೇಶ್ವರ ಸಮೂಹ ದೇವಾಲಯ ಸಮಿತಿ ಅಧ್ಯಕ್ಷ ಟಿ.ಬೆಟ್ಟಹಳ್ಳಿ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಬಿ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ ಶಂಭುಲಿಂಗ, ಉಪಾಧ್ಯಕ್ಷ ದಕ್ಷಿಣಾಮೂರ್ತಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಗೋಪಾಲ್, ಎನ್.ರವಿಕುಮಾರ್ , ಆಪ್ತ ಸಹಾಯಕರಾದ ಬಿ.ಬಸವರಾಜು ಶ್ರೀನಿವಾಸ್ , ತಹಶಿಲ್ದಾರ್ ಟಿ.ಜಿ.ಸುರೇಶಾಚಾರ್, ಗ್ರಾ.ಪಂ ಉಪಾಧ್ಯಕ್ಷ ನಾಗರಾಜಮೂರ್ತಿ, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಶಿವಮೂರ್ತಿ, ಮುಖಂಡರಾದ ಅಶೋಕ್ ಪಟೇಲ್, ಮಲ್ಲಣ್ಣೆ, ಕುಕ್ಕೂರು ಗಣೇಶ್, ನರಸಿಂಹ ಮಾದನಾಯಕ, ವಿಜಯಕುಮಾರ್, ರಾಮಲಿಂಗಯ್ಯ, ಎಂ.ಮಲ್ಲಿಕಾರ್ಜುನಸ್ವಾಮಿ, ಪ್ರಸನ್ನ, ಮಲ್ಲಾಜಮ್ಮ, ಕೋಕಿಲ, ಗದ್ದೇ ಮೋಳೆ ಸಿದ್ದರಾಜು, ಕೊಳತ್ತೂರು ಕುಮಾರ್, ಗದ್ದೆಮೋಳೆ ಸಿದ್ದರಾಜು, ರಂಗರಾಜಪುರ ರಾಜೇಶ್, ಗುತ್ತಿಗೆದಾರ ಚಂದ್ರು, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.