ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು

ಸಂಜೆವಾಣಿ ನ್ಯೂಸ್
ಮೈಸೂರು: ಆ.18:-
ಬದುಕಿನಲ್ಲಿ ಉತ್ತಮ ಮಾರ್ಗದಲ್ಲಿ ಸಾಗಲು ಬೇಕಾದ ನೀತಿ- ನಿಯಮಗಳು ಪುಸ್ತಕಗಳನ್ನು ಓದುವುದರಿಂದ ನಮಗೆ ದೊರೆಯುತ್ತವೆ. ಹೀಗಾಗಿ ಪ್ರತಿಯೊಬ್ಬರು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕವಯತ್ರಿ ಸುಕನ್ಯಾ ಮಾರುತಿ ಹೇಳಿದರು.


ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಭದ್ರಶೆಟ್ಟಿ ಬಳಗದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಲೇಖಕ ಭ.ನಾಗರಾಜ್ ವಿರಚಿತ ನಾಸ್ಟಾಲ್‍ಜಿಯಾ, ಹಾಗೂ ವಿಟ್ನೆಸ್ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪುಸ್ತಕಗಳು ಜ್ಞಾನದ ಮೂಲ. ಅವುಗಳನ್ನು ಓದುವುದರಿಂದ ಹೊಸ -ಹೊಸ ವಿಷಯಗಳನ್ನು ಕಲಿಯಬಹುದು. ಜೀವನದ ಮೌಲ್ಯಗಳನ್ನು ತಿಳಿಯಬಹುದು. ಸಮಾಜದ ಒಳಿತಿಗೆ ಬೇಕಾದ ಅಂಶಗಳು, ಬದುಕಿನಲ್ಲಿ ಅನುಸರಿಸಬೇಕಾದ ಧನಾತ್ಮಕ ಮಾರ್ಗಗಳನ್ನು ಅರಿಯಬಹುದು ಎಂದರು.
ಯಾವ ಭಾಷೆಯೂ ಅಸಮರ್ಥವಲ್ಲ, ಸಮರ್ಥರೊಬ್ಬರು ಬರುವ ತನಕ ಎಂದು ಕುವೆಂಪು ಹೇಳಿದ್ದಾರೆ. ಅದರಂತೆ ಪ್ರತಿಯೊಂದು ಭಾಷೆಗೆ ತನ್ನದೆಯಾದ ಸ್ಥಾನಮಾನವಿದೆ. ಕನ್ನಡ ಭಾಷೆ ಶ್ರೀಮಂತವಾದ ಸಾಹಿತ್ಯಿಕ ಪರಂಪರೆ ಹೊಂದಿದೆ ಎಂದರು.


ಲೇಖಕ ಭ.ನಾಗರಾಜ್ ಬರಹದ ಮೂಲಕ ಸಮಾಜ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಕೃತಿಯಲ್ಲಿ ವಾಸ್ತವ ಸಂಗತಿಯ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ನಿಕಟವಾದ ವಿಷಯ ಪ್ರಸ್ತಾಪ ಮಾಡಿದ್ದು, ವಿಮರ್ಶಾತ್ಮಕವಾಗಿದೆ. ಭಾಷೆಯೂ ಸರಳವಾಗಿದ್ದು, ಹೃದಯಸ್ಪರ್ಶಿಯಿಂದ ಕೂಡಿದೆ. ಓದುಗರು ಆಯಾಸವಿಲ್ಲದೆ ಓದಿಕೊಂಡು ಹೋಗಬಹುದು. ಬರಹವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದರು.


ನಾಸ್ಟಾಲ್‍ಜಿಯಾ ಕೃತಿ ಕುರಿತು ಮಾತನಾಡಿದ ಅಂಕಣಕಾರ ಜಿ.ಎಲ್.ತ್ರಿಪುರಾಂತಕ, ಇಂದಿನ ಯುವಪೀಳಿಗೆ ಮೊಬೈಲ್‍ನಲ್ಲಿ ಮುಳುಗಿದ್ದಾರೆ. ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಯನ್ನು ಬಿಟ್ಟು ಪುಸ್ತಕ ಓದುವುದನ್ನು ಹವ್ಯಾಸವಾಗಿಸಿಕೊಳ್ಳಬೇಕು. ಸಾಹಿತ್ಯ ಓದುವ ಮನೋಭಾವ ಬೆಳೆಸಿಕೊಳ್ಳಬೇಕು. ನಾಗರಾಜ್ ಅವರು 82ರ ಹರೆಯದಲ್ಲೂ ಕೃತಿ ರಚಿಸುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ಇದನ್ನು ಈಗಿನ ಪೀಳಿಗೆ ಅರಿಯಬೇಕು ಎಂದರು.


ಲೇಖಕರು ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ತಮ್ಮ ಕೃತಿಯಲ್ಲಿ ಸತ್ಯಕಥೆ ದಾಖಲಿದ್ದಾರೆ. ಭಾವನಾತ್ಮಕ ಸಂಬಂಧಗಳನ್ನು ನೆನಪಿಸಿದ್ದಾರೆ. ಅಲ್ಲಲ್ಲಿ ಉಪಮೇಯ ಬಳಸಿದ್ದು, ಭಾಷಾ ಕೌಶಲ ಚೆನ್ನಾಗಿದೆ. ಇದೊಂದು ಅರ್ಥಪೂರ್ಣವಾದ ಕೃತಿಯಾಗಿದೆ. ಎಲ್ಲರೂ ಓದಬೇಕು ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಭ.ನಾಗರಾಜ್ ಅವರು, ವೈದ್ಯ ಲೇಖಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಕಾವ್ಯ, ಕವಿತೆಗಳನ್ಮು ಸಂಕಲನವಾಗಿಸಿ ಕೃತಿ ಹೊರ ತಂದಿದ್ದಾರೆ. ಎಲೆಮಾರೆಯ ಕಾಯಿಯಂತೆ ಸಾಹಿತ್ಯದಾಚೆಗೆ ತೊಡಗಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಶಂಸಿಸಿದರು.
ಲೇಖಕ ಡಾ.ಭ.ನಾಗರಾಜ್ ಮಾತನಾಡಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಪ್ರಾಧ್ಯಾಪಕಿ ಬಿ.ಎಂ.ಸುಷ್ಮಾ ಇದ್ದರು.