
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.08 ಪಟ್ಟಣದ ಪುರಸಭೆ ಅಧ್ಯಕ್ಷ ಎಂ. ಮರಿ ರಾಮಪ್ಪ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಪ್ರಭಾರಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಸೆರಗಾರ್ ನೇತ್ರಾವತಿ ಹುಚ್ಚಪ್ಪ ಬುಧವಾರ ಅಧಿಕಾರ ವಹಿಸಿಕೊಂಡರು.
ಪುರಸಭೆಯಲ್ಲಿ ನಡೆದಿರುವ ಎನ್ನಲಾದ ಅವ್ಯವಹಾರ ಹಾಗೂ ಏಕ ಪಕ್ಷೀಯ ನಿರ್ಧಾರಕ್ಕೆ ಅಧ್ಯಕ್ಷರಾಗಿದ್ದ ಎಂ.ಮರಿ ರಾಮಪ್ಪ ವಿರುದ್ಧ ಸ್ವಪಕ್ಷದವರೇ ತಿರುಗಿಬಿದ್ದರು.
ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಆರೋಪದ ಸುರಿಮಳೆ ಗೈದು ಸಾಮಾನ್ಯ ಸಭೆ ಕರೆಯದೆ ಎಲ್ಲಾ ತಮಗೆ ಬೇಕಾದಂತೆ ಕಾಮಗಾರಿಗಳನ್ನು ನಡೆಸುತ್ತಿರುವುದು ಸರಿಯಲ್ಲ ಎಂದು ವಿರೋಧಿಸಿದ್ದರು. ಬಿಜೆಪಿ ಸದಸ್ಯರ ಜೊತೆ ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಮುಂದಾಗಿದ್ದರು.
ಇದರಿಂದ ಪಕ್ಷಕ್ಕೆ ಆಗುವ ಡ್ಯಾಮೇಜ್ ಹಾಗೂ ಮುಜುಗರ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎಸ್. ಭೀಮ ನಾಯ್ಕ್ ಸಭೆ ಕರೆದು ಅಧ್ಯಕ್ಷ ಮರಿ ರಾಮಪ್ಪಗೆ ರಾಜೀನಾಮೆ ನೀಡುವಂತೆ ಸೂಚಿಸಿದರು.
ಪಕ್ಷದ ತೀರ್ಮಾನದಂತೆ ಎಂ. ಮರಿ ರಾಮಪ್ಪ ಮಾ.24ರಂದು ಹೊಸಪೇಟೆಯ ಸಹಾಯಕ ಆಯುಕ್ತರಿಗೆ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆ ಏ.04 ರಂದು ಅಂಗೀಕಾರವಾಗಿರುತ್ತದೆ.
ಪುರಸಭೆಯ ಮುಖ್ಯಾಧಿಕಾರಿ ಎಂ ಕೆ ಮುಗಳಿ ಮಾತನಾಡಿ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನದಲ್ಲಿ ಮುನ್ಸಿಪಲ್ ಕಾಯ್ದೆ ರನ್ವಯ ಉಪಾಧ್ಯಕ್ಷರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರದಲ್ಲಿರುತ್ತಾರೆ ಎಂದರು.
ಪ್ರಭಾರಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ ಬೇಸಿಗೆ ಇರುವುದರಿಂದ ಕುಡಿಯುವ ನೀರು ಸಮಸ್ಯೆಯಾಗದಂತೆ ಹಾಗೂ ಚರಂಡಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯ ನವೀನ್ ಕುಮಾರ್,ಪ್ರಮುಖರಾದ ಹುಚ್ಚಪ್ಪ ಸೆರೆಗಾರ್, ಎಚ್ ಎಂ ವಿಜಯಕುಮಾರ್, ಪುರಸಭೆಯ ಮೆನೇಜರ್, ಕಂದಾಯ ಅಧಿಕಾರಿ ಮಾರೆಪ್ಪ, ಹಿರಿಯ ಆರೋಗ್ಯ ಸಹಾಯಕಿ ವಿಜಯಲಕ್ಷ್ಮಿ, ಹಾಗೂ ಸಿಬ್ಬಂದಿ ವರ್ಗ ಇದ್ದರು.




















