ಪುತ್ತೂರು: ಭಾರಿ ಪ್ರಮಾಣದ ಗಾಂಜಾ ಜಾಲ ಪತ್ತೆ; ೧೦೬ ಕೆ.ಜಿ ಗಾಂಜಾ ಸಹಿತ ಇಬ್ಬರ ಬಂಧನ

ಪುತ್ತೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು, ಭಾನುವಾರ ಸಂಜೆ ಭಾರಿ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ೫೩ ಲಕ್ಷ ರೂಪಾಯಿ ಮೌಲ್ಯದ ೧೦೬ ಕೆ.ಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಜನವರಿ ೧೯ರಂದು ಸಂಜೆ, ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಕಾರು ಮತ್ತು ಗೂಡ್ಸ್ ವಾಹನವೊಂದರಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ತಂಡ, ಸ್ಥಳದಲ್ಲಿ ವಾಹನ ತಪಾಸಣೆ ನಡೆಸಿತು.
ಕಾರ್ಯಾಚರಣೆಯ ವೇಳೆ ಸಿಕ್ಕಿಬಿದ್ದ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಿವಾಸಿಗಳಾದ ರಫೀಕ್ ಪಿ (೩೭) ಮತ್ತು ಅಬ್ದುಲ್ ಸಾದಿಕ್ (೩೭) ಎಂದು ಗುರುತಿಸಲಾಗಿದೆ. ಮೊದಲು ಕಾರನ್ನು ತಪಾಸಣೆ ನಡೆಸಿದಾಗ ೧೦೦ ಗ್ರಾಂ ಗಾಂಜಾ ಪತ್ತೆಯಾಗಿತ್ತು. ತದನಂತರ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಸುಮಾರು ೭೩ ಕಟ್ಟುಗಳಲ್ಲಿ ಪ್ಯಾಕ್ ಮಾಡಲಾಗಿದ್ದ ೧೦೬ ಕಿಲೋ ಗ್ರಾಂ ಮತ್ತು ೬೦ ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ.
ಪ್ರಾಥಮಿಕ ವಿಚಾರಣೆಯ ವೇಳೆ, ಈ ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ ೫೩,೦೩,೦೦೦/- ರೂ. ಎಂದು ಅಂದಾಜಿಸಲಾಗಿದೆ. ಪೊಲೀಸರು ಗಾಂಜಾದೊಂದಿಗೆ ಸಾಗಾಟಕ್ಕೆ ಬಳಸಿದ ವಾಹನಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (ಓಆPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.