
ದೇಶಪ್ರೇಮದ ಅಭಿವ್ಯಕ್ತಿಗೆ ಅದ್ಬುತ ಸಾಧನದ ಸೃಷ್ಟಿ- ಅಶೋಕ್ ರೈ
ಪುತ್ತೂರು: ಸುಮಾರು ೪೦ವರ್ಷ ಬಾಳ್ವಿಕೆ ಬರುವ ಧ್ವಜಸ್ತಂಭದಲ್ಲಿ ಹಾರಾಡಿದ ಈ ತ್ರಿವರ್ಣಧ್ವಜ ರಾಜ್ಯದ ಮೂರನೆಯ ಅತೀ ದೊಡ್ಡ ರಾಷ್ಟ್ರಧ್ವಜಸ್ತಂಭ ೭೮ ಮೀಟರ್ ಎತ್ತರವಿದೆ. ೨೪೦೦ ಚದರ ಅಡಿ ವಿಸ್ತೀರ್ಣ ಹೊಂದಿರುವ ತ್ರಿವರ್ಣಧ್ವಜ ತಾಲೂಕು ಕೇಂದ್ರ ಎಂದು ಪರಿಗಣಿಸಿದರೆ ರಾಜ್ಯದಲ್ಲಿ ಮೊದಲನೆಯದಾಗಿದೆ. ವರ್ಷಕ್ಕೆ ೩ ಬಾರಿ ಈ ತ್ರಿವರ್ಣಧ್ವಜದ ಬದಲಾವಣೆಯಾಗಬೇಕಾಗಿದೆ. ಪುತ್ತೂರಿನಲ್ಲಿ ಸದಾ ಕಾಲ ನೆನಪಲ್ಲಿ ಇಟ್ಟುಕೊಳ್ಳುವಂತಹ ಬೆಂಚ್ ಮಾರ್ಕ್ ಕನಸು ನನಸಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ಮಹಾಲಿಂಗೇಶ್ವೆರ ದೇವಸ್ಥಾನದ ಮೂಡಣ ದಿಕ್ಕಿನಲ್ಲಿ ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ಸ್ಥಾಪನೆಯಾದ ೭೮ ಮೀಟರ್ ಎತ್ತರದ ರಾಷ್ಟ್ರಧ್ವಜವನ್ನು ಅನಾವರಣ ಮಾಡಿ ಅವರು ಮಂಗಳವಾರ ಮಾತನಾಡಿದರು.

ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಬೀರಮಲೆ ಬೆಟ್ಟದ ಅಭಿವೃದ್ಧಿ, ಪುತ್ತೂರು ನಗರಕ್ಕೆ ಒಳಚರಂಡಿ ಯೋಜನೆ, ಇದೀಗ ನನಸಾಗಿರುವ ೭೮ ಮೀಟರ್ ಎತ್ತರದ ರಾಷ್ಟ್ರಧ್ವಜಸ್ತಂಭ ಸ್ಥಾಪನೆ, ಪುತ್ತೂರು ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿ ಇವೆಲ್ಲವೂ ನನ್ನ ಬೆಂಚ್ ಮಾರ್ಕ್ ಕನಸುಗಳು. ಒಂದೊಂದಾಗಿ ಅನುಷ್ಟಾನಗೊಳ್ಳುತ್ತಿದೆ. ಅತೀ ಎತ್ತರದಲ್ಲಿ ಪುತ್ತೂರಿನ ಆಗಸದಲ್ಲಿ ನಿತ್ಯ ಹಾರಾಡಲಿರುವ ತ್ರಿವರ್ಣಧ್ವಜ ಪುತ್ತೂರಿನ ಜನತೆಯೆ ದೇಶಪ್ರೇಮದ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ದೇಶಪ್ರೇಮ ಎಂಬುವುದು ಕೇವಲ ಭಾಷಣದಲ್ಲಿ ಇರಬಾರದು. ಅದು ನಮ್ಮ ಹೃದಯದಲ್ಲಿ ಮೂಡಿಬರಬೇಕು. ದೇಶವನ್ನು ಯಾರು ವಿರೋಧಿಸುತ್ತಾರೆಯೋ ಅವರೆಲ್ಲಾ ನಮ್ಮ ವಿರೋಧಿಗಳು. ದೇಶವನ್ನು ಪ್ರೀತಿಸುವ ಎಲ್ಲಾ ಜಾತಿ ಮತ ಧರ್ಮಗಳ ಜನತೆ ನಮ್ಮವರು ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ದೇಶದ ಅಖಂಡತೆ, ಸಮಗ್ರತೆ ಮತ್ತು ಸಾರ್ವಭೌಮತೆಯ ಸಂಕೇತ ಈ ರಾಷ್ಟ್ರಧ್ವಜ. ಈ ಚಾರಿತ್ರಿಕ ಧ್ವಜಸ್ತಂಭ ನಿರ್ಮಿಸುವಲ್ಲಿ ನಗರ ಯೋಜನಾ ಪ್ರಾಧಿಕಾರ ೩೫ ಲಕ್ಷ ರೂ. ಅನುದಾನ ನೀಡಿದೆ. ಶಾಸಕರು ೨೫ ಲಕ್ಷ ನೀಡಿದ್ದಾರೆ. ಉಳಿದ ಅನುದಾನ ನಗರಸಭೆಯಿಂದ ಪ್ರಾಪ್ತವಾಗಿದೆ. ೧ ಕೋಟಿ ರೂ. ವೆಚ್ಚದಲ್ಲಿ ಈ ಚಾರಿತ್ರಿಕ ತಾಣ ತಲೆ ಎತ್ತಿದೆ ಎಂದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ನಗರಸಭೆ ಪೌರಾಯುಕ್ತರಾದ ವಿದ್ಯಾ ಕಾಳೆ ವಂದಿಸಿದರು. ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ನಿಹಾಲ್ ಶೆಟ್ಟಿ, ಮುಖಂಡರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ನಯನಾ ರೈ, ಉದ್ಯಮಿ ಶಿವರಾಮ ಆಳ್ವ, ಕಸಪಾ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಕೆ.ಪಿ.ಆಳ್ವ ಮತ್ತಿತರು ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಶಿವಪ್ರಿಯಾ ವಂದೇಮಾತರಂ ಹಾಡಿದರು.
೨೦ ನಿಮಿಷದಲ್ಲಿ ೭೮ ಮೀಟರ್ ಎತ್ತರಕ್ಕೆ ತ್ರಿವರ್ಣಧ್ವಜ
ಕಾರ್ಯಕ್ರಮದ ಆರಂಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಿಂದ ಆಕರ್ಷಕ ಪಥಸಂಚಲನ ನಡೆಯಿತು. ಸ್ಕೌಟ್ಸ್, ಗೈಡ್ಸ್, ರೋವರ್‍ಸ್, ರೇಂಜರ್ಸ್, ಎನ್‌ಸಿಸಿ ಕೆಡೆಟ್ಸ್, ಕಾಲೇಜ್ ಸ್ಟೂಡೆಂಟ್ ಪೊಲೀಸ್ ವಿಂಗ್ ಮುಂತಾದ ಘಟಕಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಪುತ್ತೂರಿನ ನಿವೃತ್ತ ಸೈನಿಕರ ಸಂಘದ ಸದಸ್ಯರು ಸಮವಸ್ತ್ರಧಾರಿಗಳಾಗಿ ಪಥ ಸಂಚಲನದಲ್ಲಿ ಭಾಗವಹಿಸಿದರು. ರಾಷ್ಟ್ರಧ್ವಜದ ಮುಂಭಾಗದಲ್ಲಿ ಶಾಸಕರು ಗೌರವ ರಕ್ಷೆ ಸ್ವೀಕರಿಸಿದರು. ಬಟನ್ ಒತ್ತುತ್ತಿದ್ದಂತೆ ಮೋಟಾರ್ ಚಾಲಿತ ಶಕ್ತಿಯೊಂದಿಗೆ ಮೆಗಾ ತ್ರಿವರ್ಣ ಧ್ವಜವು ೨೦ ನಿಮಿಷಗಳ ಅವಧಿಯಲ್ಲಿ ೭೮ ಮೀಟರ್ ಎತ್ತರದ ಸ್ತಂಭವನ್ನೇರಿ ತುತ್ತತುದಿಯಲ್ಲಿ ರಾರಾಜಿಸಿತು. ಈ ಸಂದರ್ಭದಲ್ಲಿ ವಂದೇಮಾತರಂ, ರಾಷ್ಟ್ರಗೀತೆ ಮತ್ತು ಧ್ವಜಗೀತೆ ಹಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಐತಿಹಾಸಿಕ ಧ್ವಜಸ್ತಂಭದ ಕಾಮಗಾರಿ ನಡೆಸಿದ ಗುತ್ತಿಗೆದಾರ ಘನಶ್ಯಾಮ ಶೆಟ್ಟಿ ಅವರನ್ನು ಶಾಸಕರು ಸನ್ಮಾನಿಸಿದರು.






























