ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ತಾಲೂಕು ಈದ್ ಮಿಲಾದ್ ಸಮಿತಿಯ ನೇತೃತ್ವದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ಅವರ ೧೫೦೦ನೇ ಜನ್ಮ ದಿನಾಚರಣೆಯ ಪ್ರಯುಕ್ತ ೩೩ನೇ ವರ್ಷದ ಮೀಲಾದ್ ರ್‍ಯಾಲಿಯು ಶುಕ್ರವಾರ ಸಂಜೆ ನಡೆಯಿತು. ಪುತ್ತೂರಿನ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ಕಾಲ್ನಡಿಗೆ ಮೂಲಕ ಹೊರಟ ರ್‍ಯಾಲಿಯು ಮುಖ್ಯ ರಸ್ತೆಯಲ್ಲಿ ಸಾಗಿ ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು. ರ್‍ಯಾಲಿಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಜಾಥಾಕ್ಕೆ ಉದ್ಯಮಿ ಖಲಂದರ್ ಈಸ್ಟರ್ನ್ ಧ್ವಜ ಹಸ್ತಾಂತರ ಮಾಡುವ ಮೂಲಕ ದರ್ಬೆಯಲ್ಲಿ ಚಾಲನೆ ನೀಡಿದರು. ಉದ್ಯಮಿ ಜುನೈದ್ ಬಿಜಿ ಧ್ವಜ ಸ್ವೀಕಾರ ಮಾಡಿದರು. ಆಸಿಫ್ ಪರ್ಲಡ್ಕ ಮತ್ತು ಹಾಜಿ ರಫೀಕ್ ಧ್ವಜಾರೋಹಣ ನೆರವೇರಿಸಿದರು. ಜಾಥಾದಲ್ಲಿ ವಿವಿದ ತಂಡಗಳಿಂದ ದಫ್. ತಾಲೀಮು, ಹೂಗುಚ್ಚ ಕವಾಯತು ಹಾಗೂ ಇಸ್ಲಾಮಿಕ್ ಕಲಾ ಸಾಹಿತ್ಯಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಬಳಿಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಿಲಾದ್ ಸಮಾವೇಶ ಹಾಗೂ ನಾತೇ ಶರೀಫ್ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಜುಮ್ಮಾ ಮಸೀದಿ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಶೀರ್ವಚನ ನೀಡಿದರು. ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿಕೆ ಅಧ್ಯಕ್ಷತೆ ವಹಿಸಿದ್ದರು. ಎಂ.ಕೆ. ಸಿನಾನ್ ಸಖಾಫಿ ಅಜಿಲಮೊಗರು ಕಾರ್ಯಕ್ರಮ ಉದ್ಘಾಟಿಸಿದರು. ಸೈಯದ್ ಅಲಿ ಮನ್ನಾನಿ ಮುಖ್ಯ ಪ್ರಭಾಷಣ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಹಾಜಿ ಪಿ.ಎ. ಉಸ್ಮಾನ್ ಚೆನ್ನಾರ್ ಸಂಪ್ಯ, ಹಾಜಿ ಎಲ್.ಟಿ. ಅಬ್ದುಲ್ ರಝಾಕ್ ಮತ್ತು ಹಾಜಿ ಇಬ್ರಾಹಿಂ ಸಾಗರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


























