
ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಹಾಗೂ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಾಲಯದ ಸಹಯೋಗದಲ್ಲಿ ಡಿ. ೮ರಂದು ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ‘ಪುತ್ತೂರು ದೀಪೋತ್ಸವ-೨೦೨೬’ ಕಾರ್ಯಕ್ರಮದ ಲೋಗೋ ಹಾಗೂ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಮಹಾಲಿಂಗೇಶ್ವರನ ಪುಣ್ಯದ ಮಣ್ಣಿನಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಸುವ ದೀಪೋತ್ಸವವು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಲಿದೆ. ಮಹಾಲಿಂಗೇಶ್ವರನ ಸಾನಿಧ್ಯಕ್ಕೆ ಪೂರಕವಾಗಿ ೧೦ ಸಾವಿರ ಮಹಿಳೆಯರು ಸೇರಿ ದೀಪ ಬೆಳಗಿಸಬೇಕು. ಕರಾವಳಿಯಲ್ಲಿ ಈವರೆಗೆ ಆಗದ ಕಾರ್ಯಕ್ರಮವಾಗಿ ಮೂಡಿಬರಬೇಕು. ದೇವಾಲಯಕ್ಕೆ ಬರುವ ಭಕ್ತರಿಗೆ ನೆಮ್ಮದಿಯ ವಾತಾವರಣ ಇಲ್ಲಿ ಸಿಗುವಂತಾಗಬೇಕು. ರಾತ್ರಿಯೂ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೀಪೋತ್ಸವ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಮಾತನಾಡಿ, ಮಹಾಲಿಂಗೇಶ್ವರ ದೇವಾಲಯದಲ್ಲಿ ಅಪೂರ್ವವೆನಿಸುವ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಸುಮಾರು ೧೫-೧೮ ಲಕ್ಷ ವೆಚ್ಚವಾಗಲಿದ್ದು, ನಗರದ ೩ ಕಡೆ ದ್ವಾರ, ಪೇಟೆ ಅಲಂಕಾರ ಸೇರಿದಂತೆ ವಿವಿಧ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಆಸ್ಪತ್ರೆಯ ಖ್ಯಾತ ಎಲುಬು ತಜ್ಞ ಡಾ. ಅಜಯ್ ಅವರು ಲೋಗೋ ಬಿಡುಗಡೆ ಮಾಡಿದರು.
ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ದೀಪೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರವೀಶ್ ಪಡುಮಲೆ, ಕೋಶಾಧಿಕಾರಿ ದಾಮೋದರ ಪಾಟಾಳಿ, ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಸಹ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ, ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಮಹಾಬಲ ರೈ ಒಳತ್ತಡ್ಕ, ಪುತ್ತೂರು ದೀಪೋತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಎಲ್. ಬಲರಾಮ್ ಆಚಾರ್ಯ, ಮಹಿಳಾ ಗೌರವ ಸಲಹೆಗಾರ್ತಿ ಗೌರಿ ಬನ್ನೂರು, ಪ್ರಮುಖರಾದ ರಾಮದಾಸ್ ಗೌಡ, ಪದ್ಮನಾಭ ಶೆಟ್ಟಿ, ಭಾಸ್ಕರ ಬಾರ್ಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಲ್ಲಾಸ್ ಕೋಟ್ಯಾನ್, ನೊಣಾಲು ಜಯರಾಜ್ ರೈ, ಜಗಜೀವನ್ ದಾಸ್ ರೈ, ಕೃಷ್ಣವೇಣಿ ಉಪಸ್ಥಿತರಿದ್ದರು.
























