
ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಗಣಿತ ಹಬ್ಬ ೨೦೨೫
ಸುಳ್ಯ:ಜನಾರ್ದನ ಮಾಸ್ಟರ್ ಗಣಿತ ಕೇಂದ್ರ ಸುಳ್ಯ, ಅಮೃತ ಮಹೋತ್ಸವ ಸಮಿತಿ-೨೦೨೫ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಗಣಿತ ಹಬ್ಬ-೨೦೨೫ ಕಾರ್ಯಕ್ರಮ ಭಾನುವಾರ ನಡೆಯಿತು.
ಇಸ್ರೋ ವಿಜ್ಞಾನಿ, ಬೆಂಗಳೂರಿನ ಡಿಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ವೇಣುಗೋಪಾಲ ಉಬರಡ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜನಾರ್ದನ ಮಾಸ್ಟರ್ ಗಣಿತ ಕೇಂದ್ರದ ಅಧ್ಯಕ್ಷ ಎಂ. ಬಿ. ಸದಾಶಿವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರೊಫೆಸರ್ ಸುಭಾಷಿನಿ ಶ್ರೀವತ್ಸ, ಬೆಳ್ಳಾರೆ ಜ್ಞಾನ ಗಂಗಾ ಪಬ್ಲಿಕ್ ಸ್ಕೂಲ್ ಸಂಚಾಲಕ ಉಮೇಶ್ ಎಂ ಪಿ, ಪಿಯು ಕಾಲೇಜು ಪ್ರಾಂಶುಪಾಲ ಮೋಹನ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಲಿಂಗಪ್ಪ ಗೌಡ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ೩೦ ಕ್ಕೂ ಹೆಚ್ಚು ಎಸ್.ಎಸ್.ಎಲ್.ಸಿ. ಗಣಿತ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ವಿವಿಧ ಭಾಗದ ೧೯ ಶಾಲೆಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾತ್ರಾಭಿನಯ, ಗಣಿತ ಹಾಡು, ಬಿರಿಗಾಮಿ, ಲೆಕ್ಕಾಚಾರ ಮಾಡು, ಅಳತೆ ಮಾಡು, ಗಣಿತ ಮಾದರಿ ಮುಖಾಭಿನಯ, ಡ್ಯಾಕುಮೆಂಟರಿ, ರಸಪ್ರಶ್ನೆ, ಗಣಿತ ನೃತ್ಯ ಸೇರಿದಂತೆ ವಿವಿಧ ಗಣಿತ ಸ್ಪರ್ಧೆಗಳು ನಡೆಯಿತು.
ಗಣಿತಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ ಪುತ್ತೂರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಎರಡನೇ ಸ್ಥಾನವನ್ನು ಪಡೆದು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡರು.




























