
ಸಂಜೆವಾಣಿ ವಾರ್ತೆ
ಬೆಟ್ಟದಪುರ.ಜ.25:- ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿ.ಹಳ್ಳಿಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸುವುದರ ಜೊತೆ, ಜನರ ಜೀವನಮಟ್ಟ ಸುಧಾರಿಸುವುದೇ ಸರ್ಕಾರದ ಮುಖ್ಯ ಗುರಿ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಸಮೀಪದ ಹೊನ್ನಾಪುರ ಗ್ರಾಮದಲ್ಲಿ ಶನಿವಾರ ? 60 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಅವರು ಸರ್ಕಾರದ ವಿವಿಧ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪ್ರತಿಯೊಬ್ಬ ನಾಗರಿಕನಿಗೂ ಲಾಭ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮನವಿ ಪತ್ರ: ಗ್ರಾಮಕ್ಕೆ ಬಸ್ ಗಳ ವ್ಯವಸ್ಥೆ, ಚನ್ನಕಲ್ಲು ಕಾವಲು ಹಾಡಿಗೆ ರಸ್ತೆ ಸೌಕರ್ಯ, ದೊಡ್ಡಮ್ಮ, ಚಿಕ್ಕಮ್ಮ ತಾಯಿ ದೇವಸ್ಥಾನದ ಅಭಿವೃದ್ಧಿ, ಅಂಗನವಾಡಿ ಕೇಂದ್ರಕ್ಕೆ ರಸ್ತೆ, ಗ್ರಾಮಗಳ ಪರಿಮಿತಿಯಲ್ಲಿ ಡಾಂಬರೀಕರಣ ವ್ಯವಸ್ಥೆ, ಕೊಳವೆ ಬಾವಿ ವ್ಯವಸ್ಥೆ, ಸಿ.ಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಗ್ರಾಮಗಳಲ್ಲಿ ಅರ್ಧ ಕೆಲಸಕ್ಕೆ ನಿಂತಿರುವ ದೇವಾಲಯಗಳನ್ನು ಪೂರ್ಣಗೊಳಿಸುವಂತೆ ವಿವಿಧ ಗ್ರಾಮಗಳಿಂದ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ವೆಂಕಟೇಶ್ ತಾಲ್ಲೂಕಿನ ಗಡಿಭಾಗದ ಗ್ರಾಮಗಳಿಗೆ ಅಗತ್ಯತೆ ಗೆ ತಕ್ಕಂತೆ ಅಭಿವೃದ್ಧಿಗೆ ಮಾನ್ಯತೆ ನೀಡಲಾಗಿದೆ, ಮುಂಬರುವ ದಿನಗಳಲ್ಲಿ ಎಲ್ಲಾ ಕೆಲಸವನ್ನು ಹಂತ ಹಂತವಾಗಿ ಮಾಡಿಕೊಡುತ್ತೇನೆ, ಚಿಕ್ಕಪುಟ್ಟ ಕೆಲಸಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಮಾಡಲು ಸೂಚನೆ ನೀಡುತ್ತೇನೆ ಎಂದರು.
ಇದೆ ವೇಳೆ ಐಚನಹಳ್ಳಿ ಕೆರೆ ತೂಬು ಮತ್ತು ಕಾಲುವೆ ನಿರ್ಮಾಣ, ಮನುಗನಹಳ್ಳಿ ಕೆರೆಗೆ ಪೈಪ್ ಕಲ್ಟರ್ಟ್ ನಿರ್ಮಾಣ, ಸೂಳೆಕೋಟೆ ಹಾಗೂ ಚನ್ನಕಲ್ಲುಕಾವಲು ಗ್ರಾಮಗಳಲ್ಲಿ ಡಾಂಬರೀಕರಣ, ಆವರ್ತಿ ಗ್ರಾಮದಲ್ಲಿ ರಸ್ತೆ ಮತ್ತು ಬಾಕ್ಸ್ ಡ್ರೈನ್ ನಿರ್ಮಾಣ ಒಟ್ಟು 4.3 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು.
ತಾಲ್ಲೂಕು ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಮುಲ್ ನಿರ್ದೇಶಕ ಪ್ರಕಾಶ್, ಮುಖಂಡರಾದ ಹೊಲದಪ್ಪಚಿ ಪುಟ್ಟರಾಜು, ಶಿವಪ್ಪ, ಶೇಖರ್, ಶಿವಣ್ಣ, ಸತ್ಯನಾರಾಯಣ್, ಧನರಾಜು, ಸುರೇಶ್, ಶಂಕರಪ್ಪ, ರಾಮಣ್ಣ, ಸೈಯದ್ ರಿಯಾಜ್, ಫಯಾಜ್, ಅರವಿಂದ್, ತಹಶೀಲ್ದಾರ್ ನಿಸರ್ಗಪ್ರಿಯ ಇಒ ಸುನಿಲ್ ಕುಮಾರ್, ಹಾರಂಗಿ ಇಲಾಖೆಯ ಎಇಇ ಗೋಕುಲ್, ಎಇ ಶಿವಕುಮಾರ್, ಪಶು ಇಲಾಖೆ ಸೋಮಯ್ಯ, ಬಿ ಇ ಓ ರವಿ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

























