Home ಜಿಲ್ಲೆ ಮೈಸೂರು ಪಿಂಚಣಿ ಸೌಲಭ್ಯಗಳಿಗೆ 71.45 ಕೋಟಿ ಕೊರತೆ

ಪಿಂಚಣಿ ಸೌಲಭ್ಯಗಳಿಗೆ 71.45 ಕೋಟಿ ಕೊರತೆ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.27:-
ಮೈಸೂರು ವಿವಿ 2026-27ನೇ ಸಾಲಿಗೆ 438.04 ಕೋಟಿ ರೂ. ಬಜೆಟ್ ಮಂಡಿಸಿದ್ದು, ಪಿಂಚಣಿ ಸೌಲಭ್ಯಗಳಿಗಾಗಿ 71.45 ಕೋಟಿ ಕೊರತೆ ಎದುರಿಸುತ್ತಿದೆ.


ನಗರದ ಕ್ರಾಫರ್ಡ್ ಭವನದಲ್ಲಿ ಗುರುವಾರ ಮಧ್ಯಾಹ್ನ ನಡೆದ ಮೈಸೂರು ವಿವಿ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇತನಾನುದಾನ, ಪಿಂಚಣಿ ಅನುದಾನ, ಅಭಿವೃದ್ಧಿ ಅನುದಾನ, ಪ.ಜಾತಿ, ಪ.ಪಂಗಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನಿರೀಕ್ಷಿಸಲಾದ ಅನುದಾನ ಸೇರಿ ಒಟ್ಟಾರೆ 438.04 ಕೋಟಿಗಳಿಗೆ ಆಯವ್ಯಯ ಅಂದಾಜು ತಯಾರಿಸಲಾಗಿದೆ.


2026-27ನೇ ಸಾಲಿನಲ್ಲಿ ವಿವಿಯಿಂದ ನಿವೃತ್ತರಾಗುವ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಕ್ಕಾಗಿ 171.45 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ 100 ಕೋಟಿ ರೂ. ಮಾತ್ರ ಬಿಡುಗಡೆಗೊಳಿಸಿದೆ. ಇದರಿಂದಾಗಿ ಪಿಂಚಣಿ ಮತ್ತು ಇತರ ಸೌಲಭ್ಯಗಳಿಗಾಗಿ 71.45 ಕೋಟಿ ಕೊರತೆ ಎದುರಿಸುವಂತಾಗಿದೆ.
ಈ ಪಿಂಚಣಿ ವೆಚ್ಚಗಳನ್ನು ಹೊರತುಪಡಿಸಿದರೆ ಉಳಿತಾಯ ಆಯವ್ಯಯ ಅಂದಾಜು ಆಗುತ್ತಿತ್ತು ಎಂದು ಸಭೆಗೆ ಮಾಹಿತಿ ನೀಡಿದರು.
ಪ್ರಾಯೋಗಿಕ ಪರೀಕ್ಷೆ ಮೊದಲೆ ನಡೆಸಿ: ವಿಷಯವಾರು ಪರೀಕ್ಷೆಗೂ ಮುನ್ನ ಪ್ರಾಯೋಗಿಕ ಪರೀಕ್ಷೆ ನಡೆಸಲು ಅನುಮತಿ ಕೊಡಿ. ಏಕೆಂದರೆ ವಿಷಯವಾರು ಪರೀಕ್ಷೆಯ ಬಳಿಕ ಪ್ರಾಯೋಗಿಕ ಪರೀಕ್ಷೆ ನಡೆಸಿದರೆ ನಾವು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕಾಗುತ್ತದೆ. ಮತ್ತೊಂದು ತಿಂಗಳು ಹಾಸ್ಟೆಲ್‍ಗೆ ಅವಕಾಶ ನೀಡಿದರೆ ಆಡಿಟ್ ವೇಳೆ 10 ತಿಂಗಳು ಮಾತ್ರ ಹಾಸ್ಟೆಲ್‍ಗೆ ಅವಕಾಶವಿದೆ. ನೀವು ಹನ್ನೊಂದು ತಿಂಗಳು ನಡೆಸಿರುವ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದ್ದರಿಂದ ಮೊದಲೇ ಪ್ರಾಯೋಗಿಕ ಪರೀಕ್ಷೆ ನಡೆಸಲು ಅವಕಾಶ ನೀಡಿ ಎಂದು ಸದಸ್ಯರೊಬ್ಬರು ಕೋರಿದರು.


ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಅವರು, ಅದಕ್ಕೆ ಅವಕಾಶವಿದೆ. ನೀವು ಮುಂಚೆಯೇ ಪರೀಕ್ಷೆಗಳನ್ನು ಮುಗಿಸಿಕೊಳ್ಳಬಹುದು ಎಂದರು. ಇದಕ್ಕೆ ಪೆÇ್ರ.ಸೋಮಶೇಖರ್ ಮೊದಲಾದವರು ಧ್ವನಿಗೂಡಿಸಿದರು.
ಓಪನ್ ಡೇ ಆಚರಣೆ: ಸದಸ್ಯ ರಾಕೇಶ್ ಪಾಪಣ್ಣ ಮಾತನಾಡಿ, ನಾವು ವಿದ್ಯಾರ್ಥಿಗಳನ್ನು ಆಕರ್ಷಿಸಲು ಬೇರೆ ಬೇರೆ ಕಾರ್ಯಕ್ರಮಗಳನ್ನು ಆಗಾಗ್ಗೆ ಆಚರಿಸಬೇಕು. ಇತ್ತೀಚೆಗೆ ಆಯೋಜಿಸಿದ್ದ ಸೈಕ್ಲೋಥಾನ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಅಂತೆಯೇ ಫೇರ್ ವೆಲ್ ಕಾರ್ಯಕ್ರಮ ಆಯೋಜಿಸಬೇಕು. ಏಕೆಂದರೆ ವಿವಿಗೆ ವಿದ್ಯಾರ್ಥಿಗಳ ನೋಂದಣಿ ಕಡಿಮೆ ಆಗುತ್ತಿದೆ ಎಂದರು.


ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿಗಳು, ನಿಮಗೆ ಮಾಹಿತಿ ಕೊರತೆ ಇದೆ. ಕೆಲವೇ ಕೆಲವು ವಿಭಾಗ ಹೊರತುಪಡಿಸಿ ಉಳಿದೆಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಭರ್ತಿ ಆಗುತ್ತಿದ್ದಾರೆ. ನಮಗೆ ವಿದ್ಯಾರ್ಥಿಗಳ ಕೊರತೆ ಇಲ್ಲ. ಅಲ್ಲದೆ ಮಾನಸ ಮುಂತಾದ ಕಾರ್ಯಕ್ರಮ ಆಯೋಜಿಸಲು ಅನುದಾನ ಇಲ್ಲ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ಪೆÇ್ರ. ರವಿ, ಮಾನಸ ಕಾರ್ಯಕ್ರಮವನ್ನು ನಾವು ಪ್ರತಿ ವರ್ಷ ಎಲ್ಲಾ ವಿಭಾಗದವರು ಸೇರಿ ಪರೀಕ್ಷೆ ಮುಗಿದ ಒಂದು ವಾರದ ಬಳಿಕ ಆಯೋಜಿಸಿದರೆ ಹೆಚ್ಚು ಹೊರೆ ಆಗುವುದಿಲ್ಲ. ಅದನ್ನು ಸಿಎಫ್‍ಟಿಆರ್‍ಐ ಮಾದರಿಯಲ್ಲಿ ಮುಕ್ತ ದಿನದಂತೆ ಆಯೋಜಿಸೋಣ ಎಂದು ಸಲಹೆ ನೀಡಿದರು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿಸಿದರು.


ಯುವರಾಜಗೆ ಸ್ವಾಯತ್ತತೆ: ನಗರದ ಪ್ರಮುಖ ಕಾಲೇಜುಗಳಲ್ಲಿ ಒಂದಾದ ಯುವರಾಜ ಕಾಲೇಜಿಗೆ ಸ್ವಾಯತ್ತತೆ ಹಿಂಪಡೆದಿರುವ ಕುರಿತು ಕೆಲ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಲಪತಿಗಳು, ಕಾಲೇಜಿನಲ್ಲಿ 2017-22ರವರೆಗೆ 1.06 ಕೋಟಿ ಹಣಕಾಸಿನ ಖರ್ಚಿಗೆ ಸಂಬಂಧಿಸಿದಂತೆ ಮಾಹಿತಿಯೇ ಇಲ್ಲ. ಈ ಅನುದಾನ ಯುಜಿಸಿಯಿಂದ ಪಡೆದಿದ್ದರಿಂದ ಸರಿಯಾಗಿ ಲೆಕ್ಕ ಕೊಡಬೇಕು.


ಆರ್ಥಿಕ ಅಶಿಸ್ತಿನ ಕಾರಣದಿಂದ ಸ್ವಾಯತ್ತತೆ ಹಿಂದಕ್ಕೆ ಪಡೆಯಬೇಕಾಗಿ ಬಂತು. ಈ ಕುರಿತು ಮಾತನಾಡುವ ಮಾಜಿ ಕುಲಪತಿಗಳು ತಮ್ಮ ಅವಧಿಯಲ್ಲಿಯೇ ಆ ಹಣಕಾಸಿನ ಕುರಿತು ಗಮನಹರಿಸಿ, ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಏಕೆ ಮಾಡಲಿಲ್ಲ ಗೊತ್ತಿಲ್ಲ ಎಂದರು.


ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯರೊಬ್ಬರು, ಅನಗತ್ಯ ನೇಮಕಾತಿ ನಿಮ್ಮ ಅವಧಿಯಲ್ಲಿ ನಡೆದಿಲ್ಲವಾದ್ದರಿಂದ ನಿಮ್ಮನ್ನು ಅಭಿನಂದಿಸುವುದಾಗಿ ವಿಶ್ರಾಂತ ಕುಲಪತಿಗೆ ಟಾಂಗ್ ನೀಡಿದರು.
ಪಿಂಚಣಿ ಕೊರತೆ ಹೇಗಾಯಿತು?: ಹಿರಿಯ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಮಾತನಾಡಿ, ಇತ್ತೀಚೆಗೆ ಹಿಂದಿನ ಕುಲಪತಿಯೊಬ್ಬರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ಬೇಕು, ಜತೆಗೆ ಪಿಂಚಣಿ ಕೊರತೆಗೆ ಕಾರಣವೇನು ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್, ಬೆಂಗಳೂರು ವಿವಿಯಲ್ಲಿ ಇರುವಂತೆ ಆರ್ಥಿಕ ಶಿಸ್ತು ಮೈಸೂರು ವಿವಿಯಲ್ಲಿ ಇಲ್ಲ. ಈ ಹಿಂದೆ ಪಿಂಚಣಿಗೆ ಪ್ರತ್ಯೇಕ ಹಣ ಮೀಸಲಿತ್ತು. ಕೋವಿಡ್ ಸಂದರ್ಭದಲ್ಲಿ ಸರ್ಕಾರದಿಂದ ನೀಡುವ ಅನುದಾನ ಕೊರತೆಯಾದಾಗ, ಪಿಂಚಣಿಗೆ ಮೀಸಲಾದ ಹಣ ಬಳಸಿಕೊಂಡಿರಿ, ಆಮೇಲೆ ಕೊಡುವುದಾಗಿ ಸರ್ಕಾರ ಹೇಳಿತು. ಆದರೆ ಕೊಡಲೇ ಇಲ್ಲ. ಈ ವರ್ಷ ಸರ್ಕಾರದೊಡನೆ ಮಾತುಕತೆ ನಡೆಸಿ, ಪತ್ರ ವ್ಯವಹಾರ ನಡೆಸಿದ ಮೇಲೆ 100 ಕೋಟಿ ರೂ. ನೀಡಿದೆ. ಉಳಿಕೆ 71.45 ಕೋಟಿ ಕೊರತೆಯಾಗಿದೆ. ಅದನ್ನು ಸರಿದೂಗಿಸಿಕೊಳ್ಳಬೇಕು ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಕುಲಸಚಿವರಾದ ಪೆÇ್ರ.ನಾಗರಾಜು, ಎಂ.ಕೆ.ಸವಿತಾ, ಪ್ರಭಾರ ಹಣಕಾಸು ಅಧಿಕಾರಿಗಳು ಇದ್ದರು.