
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.09: ನಗರದ ಕಾಕರ್ಲ ತೋಟದ ಪಾಲಿಕೆಯ ಓವರ್ ಹೆಡ್ ವಾಟರ್ ಟ್ಯಾಂಕಿನಲ್ಲಿ ವಾಲ್ ಮ್ಯಾನ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಎರ್ರಿಸ್ವಾಮಿ(36) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ನಿನ್ನೆ ರಾತ್ರಿ ಟ್ಯಾಂಕಿಗೆ ನೀರು ಪಂಪ್ ಆಗುತ್ತಿರುವುದನ್ನು ಪರಿಶೀಲನೆಗೆ ಹೋಗಿದ್ದ ಎರ್ರಿಸ್ವಾಮಿ ಆಯತಪ್ಪಿ ಅದರಲ್ಲಿ ಬಿದ್ದಿದ್ದಾನೆ. ರಾತ್ರಿ ಆತ ಮನೆಗೆ ಬರದೇ ಇದ್ದಾಗ ಬೆಳಿಗ್ಗೆ ಆತನ ದೇಹ ಟ್ಯಾಂಕಿನ ನೀರಿನಲ್ಲಿ ತೇಲಾಡುವುದು ಕಂಡು ಬಂದಿದೆ. ಇವರು ಗುತ್ತಿಗೆ ಆಧಾರದಲ್ಲಿ ಕಳೆದ ನಾಲ್ಕು ವರ್ಷದಿಂದ ಈ ಕೆಲಸ ಮಾಡುತ್ತಿದ್ದರಂತೆ.
ಓವರ್ ಪ್ಲೋ ಆದರೆ ಅಧಿಕಾರಿಗಳು ಬಯ್ಯುತ್ತಾರೆಂದು ನೋಡಲು ಹೋಗಿದ್ದಾನೆಂದು ಹೇಳಲಾಗುತ್ತಿದೆ. ಟ್ಯಾಂಕ್ನಲ್ಲಿನ ನೀರಿನ ಮಟ್ಟವನ್ನು ಸುರಕ್ಷಿತವಾಗಿ ಪರಿಶೀಲಿಸಲು ಅಗತ್ಯವಿರುವ ಗೇಜ್ ಮಾಪನ ವ್ಯವಸ್ಥೆ ಇಲ್ಲದಿರುವುದು ಈ ಅಪಾಯಕ್ಕೆ ಕಾರಣ ಎನ್ನಲಾಗುತ್ತಿದೆ.
ಸಾವಿನ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಈ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬೆಳಿಗ್ಗೆ ಮೃತನ ದೇಹ ಹೊರ ತೆಗೆದು ಪೋಸ್ಟ್ ಮಾರ್ಟ್ಂಗೆ ಕಳಿಸಿದೆ.


























