
ಬೆಂಗಳೂರು:ಮೇ ೨೭- ಕನ್ನಡ ಕಿರುತೆರೆ ಮತ್ತು ಚಲನಚಿತ್ರ ನಟ ಶ್ರೀಧರ್ ನಾಯಕ್ (೪೭) ಅವರು ಮೇ ೨೬ರಂದು ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಅವರಿಗೆ ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಶ್ರೀಧರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರು ಎಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಮೃತ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.
ಸ್ಫುರದ್ರೂಪಿ ನಟ ತಮ್ಮ ನಟನೆಯಿಂದಾಗಿ ಮನೆಮಾತಾಗಿದ್ದರು. ಅನಾರೋಗ್ಯದಿಂದಾಗಿ ಗುರುತೇ ಸಿಗದಷ್ಟು ಬದಲಾಗಿ ಶ್ರೀಧರ್ ನಾಯಕ್ ಬೆಡ್ ಮೇಲೆ ಮಲಗಿದ್ದು ನೋಡಿ ಹಲವರಿಗೆ ಶಾಕ್ ಆಗಿತ್ತು. ಸಹಾಯ ಮಾಡುವಂತೆ ಅನೇಕರು ಕೋರಿಕೊಂಡಿದ್ದರು.
‘ಪಾರು’ ಮತ್ತು ‘ವಧು’, ‘ಮಂಗಳಗೌರಿ’, ‘ಮನೆಯೆ ಮಂತ್ರಾಲಯ’ ಸೇರಿದಂತೆ ೪೦ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಇವರ ಪಾತ್ರಗಳು ಜನಪ್ರಿಯವಾಗಿದ್ದವು. ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ನಟಿಸಿದ್ದರು.