ಪಾಕ್ ಸಚಿವರಿಂದ ಪ್ರಶಸ್ತಿ ಸ್ವೀಕರಿಸಲು ಭಾರತ ನಕಾರ


ದುಬೈ, ಸೆ. ೨೯: ಮಳೆ ನಿಂತರು ಮರದ ಹನಿ ನಿಲ್ಲಲಿಲ್ಲ ಎಂಬಾಂತಾಗಿದೆ ಏಷ್ಯಾ ಕಪ್ ಟಿ೨೦ ಕ್ರಿಕೆಟ್ ಟೂರ್ನಿಯ ಸದ್ಯದ ಪರಿಸ್ಥಿತಿ. ದುಬೈನಲ್ಲಿ ಭಾನುವಾರ ರಾತ್ರಿ ಕೊನೆಗೊಂಡ ೧೭ನೇ ಆವೃತ್ತಿಯು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.
ಐಸಿಸಿ ಅಧ್ಯಕ್ಷ ಹಾಗೂ ಪಾಕ್ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟೀಂ ಇಂಡಿಯಾ ಆಟಗಾರರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದೇ ಇದಕ್ಕೆ ಕಾರಣವಾಗಿದೆ.
ಪಂದ್ಯ ಗೆದ್ದ ನಂತರ ಭಾರತ ಆಟಗಾರರ ಪಾಕ್ ಆಟಗಾರರಿಗೆ ಹಸ್ತಲಾಘವ ಮಾಡದಿರುವುದು ವಿವಾದಕ್ಕೆ ಕಾರಣವಾಗಿದ್ದ ಬೆನ್ನಲ್ಲೇ ನಿನ್ನೆ ಫೈನಲ್ ಪಂದ್ಯ ಗೆದ್ದ ಬಳಿಕ ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿ ಟ್ರೋಫಿ ಇಲ್ಲದೆ ಸೂರ್‍ಯಕುಮಾರ್ ಪಡೆ ಸಂಭ್ರಮಾಚರಿಸಿತ್ತು.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಒಡ್ಡಿದ ೧೪೭ ರನ್ ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಭಾರತ ತಂಡ, ತಿಲಕ್ ವರ್ಮಾ(ಅಜೇಯ ೬೯), ಶಿವಂ ದುಬೆ (೩೩) ಮತ್ತು ಸಂಜು ಸ್ಯಾಮ್ಸನ್ (೨೪) ಅವರ ಸಾಹಸದಿಂದ ೫ ವಿಕೆಟ್ ಗಳಿಂದ ಗೆದ್ದು ವಿಜಯೋತ್ಸವ ಆಚರಿಸಿತು.ಆದರೆ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಟ್ರೋಫಿ ಇಲ್ಲದೆ ಸಂಭ್ರಮಿಸಿದ್ದು, ಇದೇ ಮೊದಲು.
ಘಟನೆ ಏನು: ಫೈನಲ್ ನಂತರ ಉಭಯ ತಂಡಗಳು ಸಾಂಪ್ರದಾಯಿಕ ಹಸ್ತಲಾಘವದಿಂದ ಹಿಂದೆ ಸರಿದವು. ನಂತರ ಪ್ರಶಸ್ತಿ ಪ್ರದಾನಕ್ಕೆ ವೇದಿಕೆ ನಿರ್ಮಿಸಲಾಯಿತು. ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಮತ್ತು ಅವರ ಕುಟುಂಬಸ್ಥರು ಸ್ಥಳದಲ್ಲಿ ಮೊಕ್ಕಾಂ ಹೂಡಿದರು.
ಐಸಿಸಿಗೆ ದೂರು
ಈ ಮೊದಲೇ ಹೇಳಿದಂತೆ ಭಾರತೀಯ ಆಟಗಾರರು ಎಸಿಸಿ ಅಧ್ಯಕ್ಷರಾಗಿರುವ ಪಾಕಿಸ್ತಾನದ ನಖ್ವಿ ಅವರಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಆಯೋಜಕರ ಮೂಲಕ ತಮ್ಮ ವಾದ ಮಂಡಿಸಿದರು.
ಇದರಿಂದ ಸ್ಥಳದಲ್ಲಿ ಕೆಲವೊತ್ತು ಗೊಂದಲ ಸೃಷ್ಟಿಯಾಯಿತು. ಆಯೋಜಕರು ಮತ್ತು ನಖ್ವಿ ನಡುವೆ ಮಾತುಕತೆ ನಡೆದವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಶಸ್ತಿ ಪ್ರದಾನ ವಿಳಂಬವಾಯಿತು.
ಈ ಮಧ್ಯೆ, ನಿರೂಪಕ ಸೈಮನ್ ಡೌಲ್ ವೈಯಕ್ತಿಕ ಪ್ರಾಯೋಜಕರ ಪ್ರಶಸ್ತಿಗಳನ್ನು ಘೋಷಿಸಿದರು. ಇದನ್ನು ಉಭಯ ತಂಡಗಳ ಆಟಗಾರರು ಸ್ವೀಕರಿಸಿದರು.ಬಳಿಕ ರನ್ನರ್ ಅಪ್ ಪ್ರಶಸ್ತಿಯನ್ನು ಪಾಕಿಸ್ತಾನ ಆಟಗಾರರು ಸ್ವೀಕರಿಸಿದರು.
ಈ ವೇಳೆ ಡೌಲ್, ಭಾರತದ ನಿಲುವನ್ನು ವೇದಿಕೆಯಲ್ಲಿ ಸ್ಪಷ್ಟಪಡಿಸಿದರು. ಪ್ರಶಸ್ತಿ ಸಮರಾಂಭ ಕೊನೆಗೊಳ್ಳುತ್ತದೆ ಎಂದು ಹೇಳಿದರು. ಕೂಡಲೇ ವೇದಿಕೆಯಿಂದ ಕೆಳಗಿಳಿದ ನಖ್ವಿ ನಿರ್ಗಮನದತ್ತ ತೆರಳಿದರು. ಟೂರ್ನಿಯ ಆಯೋಜಕ ಸಿಬ್ಬಂದಿ ಟ್ರೋಫಿಯನ್ನು ಅವರ ಹಿಂದೆಯೇ ಕೊಂಡೊಯ್ದರು.
ಇದರಿಂದ ಅಚ್ಚರಿಗೊಂಡ ಟೀಮ್ ಇಂಡಿಯಾ ಹಾಗೂ ಸಹಾಯಕ ಸಿಬ್ಬಂದಿ ಟ್ರೋಫಿ ಇಲ್ಲದೆ ಸಂಭ್ರಮಿಸಿತು.
ಐಸಿಸಿಗೆ ದೂರು ನೀಡಲು ನಿರ್ಧಾರ: ನಾಟಕೀಯ ಬೆಳವಣಿಗೆಗಳಿಂದ ಕುಪಿತಗೊಂಡಿರುವ ಬಿಸಿಸಿಐ, ವಿಜೇತ ತಂಡಕ್ಕೆ ಟ್ರೋಫಿ ನೀಡದ ಎಸಿಸಿ ಆಯೋಜಕರು ಹಾಗೂ ಅಧ್ಯಕ್ಷರ ವಿರುದ್ಧ ಐಸಿಸಿಯಲ್ಲಿ ದೂರು ನೀಡಲು ನಿರ್ಧರಿಸಿದೆ.
ಈ ಸಂಬಂಧ ಮಾತನಾಡಿರುವ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ, ನಮ್ಮ ದೇಶದ ವಿರುದ್ಧ ಯುದ್ಧ ಸಾರಿರುವ ವ್ಯಕ್ತಿಯಿಂದ ಭಾರತವು ಟ್ರೋಫಿ ಸ್ವೀಕರಿಸಲು ಸಾಧ್ಯವಿಲ್ಲ. ಅವರಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದ ಮಾತ್ರಕ್ಕೆ ಟ್ರೋಫಿಯನ್ನು ಅವರು ಕೊಂಡೊಯ್ಯಲಾಗದು ಎಂದು ಹೇಳಿದ್ದಾರೆ. ಕೂಡಲೇ ಟ್ರೋಫಿ ಮತ್ತು ಪದಕಗಳನ್ನು ಭಾರತಕ್ಕೆ ಹಿಂದಿರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಇದು ಅನಿರೀಕ್ಷಿತ ಹಾಗೂ ಬಾಲಿಶ ಸ್ವರೂಪದ ನಡೆಯಾಗಿದೆ. ನವೆಂಬರ್ ಮೊದಲ ವಾರದಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಕುರಿತು ಪ್ರತಿಭಟನೆ ದಾಖಲಿಸಲಿದ್ದೇವೆ” ಎಂದು ತಿಳಿಸಿದರು.
ಪಹಲ್ಗಾಮ್ ಸಂತ್ರಸ್ತರಿಗೆ
ಏಷ್ಯಾ ಕಪ್ ಹಣ :
ಏಷ್ಯಾಕಪ್ ಟೂರ್ನಿಯ ಪಂದ್ಯದ ಶುಲ್ಕವನ್ನು ಸಶಸ್ತ್ರ ಪಡೆಗಳಿಗೆ ಮತ್ತು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನೀಡಲು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ನಿರ್ಧರಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈದಾನದಲ್ಲೂ ಆಪರೇಷನ್ ಸಿಂಧೂರ: ಪ್ರಧಾನಿ : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಗೆದ್ದ ಭಾರತ ತಂಡಕ್ಕೆ ಆಪರೇಷನ್ ಸಿಂದೂರ ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಕ್ರಿಕೆಟ್ ಮೈದಾನದಲ್ಲೂ ಆಪರೇಷನ್ ಸಿಂಧೂರ..ಫಲಿತಾಂಶವು ಒಂದೇ ಆಗಿದೆ ಮತ್ತು ಭಾರತ ಗೆದ್ದಿದೆ ಎಂದು ಹೇಳಿದ್ದಾರೆ. ” ಕ್ರಿಕೆಟ್ ಮೈದಾನದಲ್ಲಿ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ ಆಗಿರುತ್ತದೆ – ಭಾರತಕ್ಕೆ ಗೆಲುವು! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ತನ್ನ ಮಿಲಿಟರಿ ಕಾರ್ಯಾಚರಣೆಗೆ “ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿತ್ತು, ಏಕೆಂದರೆ ಅದು ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ನಂತರ ಪಾಕಿಸ್ತಾನ ಮಿಲಿಟರಿಯೊಂದಿಗೆ ಸಂಘರ್ಷದಲ್ಲಿ ತೊಡಗಿತ್ತು.
೯ನೇ ಬಾರಿ ಏಷ್ಯಾ ಕಪ್ ಗೆದ್ದ ಟೀಮ್ ಇಂಡಿಯಾಗೆ ಬಿಸಿಸಿಐ ೨೧ ಕೋಟಿ ರೂಪಾಯಿ ಬಹುಮಾನ ಪ್ರಕಟಿಸಿದೆ.