
ವಾಷಿಂಗ್ಟನ್, ಮೇ.24:- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದು, ಉಭಯ ದೇಶಗಳ ನಡುವಿನ ನಾಲ್ಕು ದಿನಗಳ ಸಂಘರ್ಷದಲ್ಲಿ ನಾಗರಿಕರ ಮೇಲೆ ದಾಳಿ ನಡೆಸಿದ ಕ್ರಮವನ್ನು ಕಟುವಾಗಿ ಟೀಕಿಸಿದೆ.
ಉಗ್ರರು ಮತ್ತು ನಾಗರಿಕರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದ ಪಾಕಿಸ್ತಾನಕ್ಕೆ ನಾಗರಿಕ ಸಂರಕ್ಷಣೆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ ಭಾರತದ ಕಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಉಭಯ ದೇಶಗಳ ನಡುವಿನ ಸಂಘರ್ಷದ ವಿಚಾರದಲ್ಲಿ ಪಾಕಿಸ್ತಾನ ಪ್ರತಿನಿಧಿಯ ಆಧಾರ ರಹಿತ ಆರೋಪಗಳಿಗೆ ಪ್ರತಿಕ್ರಿಯಿಸುವುದು ಕಷ್ಟ ಎಂದು ಹೇಳಿದರು.
“ರೂಪುಗೊಳ್ಳುತ್ತಿರುವ ಅಪಾಯಗಳು, ನಾಗರಿಕರು, ವಿಸ್ತøತವಾಗಿ ಮನುಕುಲ ಮತ್ತು ವಿಶ್ವಸಂಸ್ಥೆ ಸಿಬ್ಬಂದಿ, ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳ ಸುರಕ್ಷತೆ ಹಾಗೂ ಹೊಣೆಗಾರಿಕೆ ವ್ಯವಸ್ಥೆ ಕುರಿತ ಮುಕ್ತ ಚರ್ಚೆಯಲ್ಲಿ ಹರೀಶ್ ಈ ವಾಗ್ದಾಳಿ ನಡೆಸಿದರು.
ಕಾಶ್ಮೀರ ಸಮಸ್ಯೆ ಮತ್ತು ಇತ್ತೀಚಿನ ಸಂಘರ್ಷದ ವಿಚಾರ ಪ್ರಸ್ತಾಪಿಸಿದ ಪಾಕ್ ಪ್ರತಿನಿಧಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಹರೀಶ್, ಪಾಕಿಸ್ತಾನ ಪ್ರಾಯೋಜಿತ ಉಗ್ರಗಾಮಿ ಕೃತ್ಯಗಳನ್ನು ಭಾರತ ದಶಕಗಳಿಂದ ಎದುರಿಸುತ್ತಾ ಬಂದಿದೆ.
ಭಯಾನಕ ಮುಂಬೈ ದಾಳಿಯಿಂದ ಹಿಡಿದು ಪಹಲ್ಗಾಮ್ ದಾಳಿವರೆಗೆ ಎಷ್ಟೋ ಭಯೋತ್ಪಾದಕ ಕೃತ್ಯಗಳು ನಡೆದಿವೆ. ಇದಕ್ಕೆ ಬಲಿಯಾಗಿರುವುದು ನಾಗರಿಕರು, ಪ್ರಗತಿ ಮತ್ತು ನೈತಿಕ ಸ್ಥೈರ್ಯ ಎಂದರು.
ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರಗಾಮಿಗಳ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನೆ ಅಧಿಕಾರಿಗಳು ಭಾಗವಹಿಸಿದ್ದನ್ನು ಹರೀಶ್ ಉಲ್ಲೆಖಿಸಿದರು. ಈ ದೇಶಕ್ಕೆ ನಾಗರಿಕರು ಮತ್ತು ಉಗ್ರರ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ; ನಾಗರಿರ ರಕ್ಷಣೆ ಬಗ್ಗೆ ಮಾತನಾಡುವ ಹಕ್ಕು ಇವರಿಗಿಲ್ಲ ಎಂದು ಟೀಕಿಸಿದರು.