
ಸಂಜೆವಾಣಿ ನ್ಯೂಸ್
ಮೈಸೂರು: ಜೂ.07:– ಪ್ರತಿಯೊಬ್ಬರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಸುತ್ತಲಿನ ಪರಿಸರವನ್ನು ಉತ್ತಮವಾಗಿ ಇರಿಸಿಕೊಳ್ಳಲು ಪ್ರಯತ್ನ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಅಧ್ಯಕ್ಷರೂ ಆದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕವಿಪ್ರನಿನಿ) ಹಾಗೂ ಮೈಸೂರು ವ್ಯಾಪ್ತಿಯ ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದ ಕೆಸರೆಯಲ್ಲಿರುವ ಚಾವಿಸಾನಿನಿ ಕಾಲೋನಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವೆಲ್ಲರೂ ದಿನನಿತ್ಯದ ಬೇಕು ಬೇಡಗಳ ನಡುವೆ ಪರಿಸರದ ಮೇಲೆ ಗದಾಪ್ರಹಾರ ಮಾಡುತ್ತಿದ್ದೇವೆ. ಪರಿಸರ ಉಳಿಸುವ ಪ್ರಯತ್ನಗಳ ನಡುವೆಯೂ ನಮ್ಮ ಅರಿವಿಗೆ ಬಾರದಂತೆ ಅದಕ್ಕೆ ಹಾನಿಯಾಗುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಇದರಿಂದಾಗಿ ಪರಿಸರದ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಹಿಂದೆ ಆಧುನಿಕತೆ ಇಲ್ಲದಿದ್ದರೂ ನಮ್ಮ ಪೂರ್ವಿಕರು ಉತ್ತಮ ಆಹಾರ ಸೇವನೆ ಮಾಡುತ್ತಾ, ಆರೋಗ್ಯವಂತರಾಗಿದ್ದರು. ನಮ್ಮ ಆರೋಗ್ಯವೂ ಒಂದು ಪರಿಸರವಾಗಿದ್ದು, ಯಾವುದೇ ಕಾಯಿಲೆಗೆ ತುತ್ತಾಗದೆ, ಔಷಧ ಬಳಸದೆ ಬದುಕಬೇಕಿದೆ. ಪರಿಸರ ಉತ್ತಮವಾಗಿದ್ದರೆ ನಮ್ಮ ಆರೋಗ್ಯ ಉತ್ತಮವಾಗಿರಲಿದ್ದು, ಈ ನಿಟ್ಟಿನಲ್ಲಿ ನಾವು ಚೆನ್ನಾಗಿರುವ ಜೊತೆಗೆ ನಮ್ಮ ಸುತ್ತಲಿನ ಪರಿಸರವನ್ನು ಉತ್ತಮವಾಗಿ ಇರಿಸಿಕೊಳ್ಳಬೇಕಿದೆ. ಸೆಸ್ಕ್ ಕುಟುಂಬದಲ್ಲಿರುವ ಎಂಟು ಸಾವಿರ ಅಧಿಕಾರಿ ಮತ್ತು ಸಿಬ್ಬಂದಿ ತಲಾ 2 ಸಸಿಗಳನ್ನು ನೆಟ್ಟು ಪರಿಸರ ಕಾಪಾಡಬೇಕಿದ್ದು, ಇದಕ್ಕಾಗಿ ಸೆಸ್ಕ್ ವತಿಯಿಂದ ಉಚಿತವಾಗಿ ಸಸಿಗಳನ್ನು ನೀಡಲಾಗುವುದು ಎಂದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ರಾಜು ಮಾತನಾಡಿ, ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಸೆಸ್ಕ್ ವ್ಯಾಪ್ತಿಯ ಎಲ್ಲ ಕಚೇರಿಗಳಲ್ಲಿ ಒಂದು ವಾರಗಳ ಕಾಲ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪರಿಸರ ದಿನವನ್ನು ಆಚರಿಸುವ ಜೊತೆಗೆ ಪ್ರತಿ ಕಚೇರಿ ಆವರಣದಲ್ಲಿ ಕನಿಷ್ಠ 5 ಸಸಿಗಳನ್ನು ನೆಡಬೇಕಿದೆ. ಇದಕ್ಕಾಗಿ ನಿಗಮ ಕಚೇರಿಯಲ್ಲಿ 50ಕ್ಕೂ ಹೆಚ್ಚು ಮಹಾಘನಿ ಸಸಿಗಳನ್ನು ಇರಿಸಿದ್ದು, ಅಗತ್ಯವಿರುವವರು ನಿಗಮ ಕಚೇರಿಯಿಂದ ಸಸಿಗಳನ್ನು ಪಡೆದು, ತಮ್ಮ ಕಚೇರಿ ಆವರಣದಲ್ಲಿ ಮಹಾಘನಿ ಸಸಿಗಳನ್ನು ನೆಡಬೇಕಿದೆ. ಆ ಮೂಲಕ ನಾವೆಲ್ಲರೂ ಒಗ್ಗೂಡಿ ಪರಿಸರ ದಿನವನ್ನು ಆಚರಿಸಿ, ಪರಿಸರ ಸಂರಕ್ಷಣೆಗೆ ಮುಂದಾಗೋಣ ಎಂದು ಹೇಳಿದರು.
ಇದಕ್ಕೂ ಮುನ್ನ ವಿಶ್ವ ಪರಿಸರ ದಿನ ಕಾರ್ಯಕ್ರಮದ ಅಂಗವಾಗಿ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಸಮಾರಂಭದಲ್ಲಿ ತೋಟಗಾರಿಕೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಡಾ.ಬೆಲವಲ ರಾಮಕೃಷ್ಣ, ಮೈಸೂರು ವಲಯದ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಅಧೀಕ್ಷಕ ಇಂಜಿನಿಯರುಗಳಾದ ಸೋಮಶೇಖರ್, ಸುನೀಲ್ ಕುಮಾರ್, ಸೆಸ್ಕ್ ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್.ಜಂಗಿನ, ಪ್ರಧಾನ ವ್ಯವಸ್ಥಾಪಕ ಕೆ.ಎಲ್.ಲೋಕೇಶ್ ಇತರರಿದ್ದರು.