ಪರಿಸರ ಮಾಲಿನ್ಯ: ಅಧಿಕಾರಿಗಳ ವಿರುದ್ಧ ಶಾಸಕ ಮಂಜು ಆಕ್ರೋಶ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.18:
ತಾಲೂಕಿನ ಮಾಕವಳ್ಳಿ ಬಳಿಯ ಹೇಮಗಿರಿ ಶುಗರ?ಸ್ ಕಾರ್ಖಾನೆ ಮತ್ತು ಬಣ್ಣೆನಹಳ್ಳಿ ಬಳಿಯಿರುವ ಮೆಗಾ ಫೇವರಿಚ್ ಫುಡ್ ಪಾರ್ಕ್ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗುತ್ತಿದ್ದು ರೈತಾಪಿವರ್ಗಕ್ಕೆ ಸಮಸ್ಯೆಯಾಗುತ್ತಿದ್ದರೂ ಅವುಗಳ ವಿರುದ್ದ ನೈಜ ವರದಿ ಸಲ್ಲಿಸಿ ಕ್ರಮ ಜರುಗಿಸಲು ಮುಂದಾಗದ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ವಿರುದ್ದ ಶಾಸಕ ಹೆಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದ ರೇಷ್ಮೆ ಇಲಾಖೆಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಪರಿಸರ ಮಾಲಿನ್ಯ ತಡೆಗಟ್ಟಲು ವಿಫಲವಾಗಿರುವ ಅಧಿಕಾರಿಗಳ ವಿರುದ್ದ ತಮ್ಮ ಆಕ್ರೋಶ ಹೊರಹಾಕಿದರು.
ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆಯ ಕಲುಷಿತ ತ್ಯಾಜ್ಯ ನೀರು ಮತ್ತು ಮೆಗಾ ಫೇವರಿಚ್ ಫುಡ್ ಪಾಕ್ರ್ನವರು ಸಮೀಪದ ಸರ್ಕಾರಿ ಕಟ್ಟೆಯೊಂದಕ್ಕೆ ಹೊರಬಿಡುತ್ತಿರುವ ಕಲುಷಿತ ನೀರಿನ ಬಾಟಲುಗಳನ್ನು ಸಭೆಯಲ್ಲಿ ಪ್ರದರ್ಶಿಸಿದ ಶಾಸಕರು ಈ ನೀರು ಜನ ಮತ್ತು ಜಾನುವಾರುಗಳು ಕುಡಿಯುಲು ಯೋಗ್ಯವೆ? ಎಂದು ಪ್ರಶ್ನಿಸಿದರು. ಹೇಮಗಿರಿ ಸಕ್ಕರೆ ಕಾರ್ಖಾನೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಹಾರುಬೂದಿ ಸಮಸ್ಯೆ ಉಂಟಾಗಿದೆ. ಕಾರ್ಖಾನೆಯ ಸಮೀಪ ನಿಮ್ಮ ವಾಹನಗಳನ್ನು ಒಂದೆರಡು ಘಂಟೆಗಳ ಕಾಲ ನಿಲ್ಲಿಸದರೆ ಸಾಕು ಅದರ ಮೇಲೆ ಎಷ್ಟು ಪ್ರಮಾಣದ ಹಾರುಬೂದಿ ಬಿದ್ದಿದೆ ಎನ್ನುವುದು ನಮ್ಮ ಅರಿವಿಗೇ ಬರುತ್ತದೆ.

ಹಾರುಬೂದಿಯಿಂದ ಕಾರ್ಖಾನೆ ಸುತ್ತಲ ಕೃಷಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ರೈತರ ತೆಂಗು, ಅಡಿಕೆ ಮುಂತಾದ ಬೆಳೆಗಳ ಇಳುವರಿ ಕುಸಿದಿದ್ದು ರೈತರು ಆತಂಕಕ್ಕೆ ಸಿಲುಕಿದ್ದಾರೆ. ಹಾರುಬೂದಿಯಿಂದ ಕೃಷಿ ಮತ್ತು ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆಗಳು ಪರಿಶೀಲನೆ ಮಾಡಿ ವರದಿ ತಯಾರಿಸಿ ಸೂಕ್ತ ಕ್ರಮ ವಹಿಸಬೇಕು. ನಾನು ಕಾರ್ಖಾನೆಯ ವಿರೋಧಿಯಲ್ಲ. ಕಾರ್ಖಾನೆಯಿಂದ ನಮ್ಮ ತಾಲೂಕಿನ ರೈತರ ಆರ್ಥಿಕ ಅಭಿವೃದ್ದಿಯಾಗಿದೆ. ಆದರೆ ಅಭಿವೃದ್ದಿಯ ಹಿಂದಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆಯೂ ನಾವು ಗಮನ ಹರಿಸಬೇಕು. ಹೇಮಗಿರಿ ಸಕ್ಕರೆ ಕಾರ್ಖಾನೆ ಮತ್ತು ಫುಡ್ ಪಾರ್ಕಿನ ಕಲುಷಿತ ನೀರು ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಈ ಭಾಗದ ರೈತರು ಸಾಕಷ್ಟು ಸಲ ಹೋರಾಟ ನಡೆಸಿದರೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳು ಕ್ರಮ ವಹಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ ಶಾಸಕ ಹೆಚ್.ಟಿ.ಮಂಜು ತಾವು ಬಾಟಲುಗಳ ಮೂಲಕ ತಂದಿರುವ ನೀರು ಜನರಿರಲಿ ಜಾನುವಾರುಗಳಾದರೂ ಕುಡಿಯಲು ಯೋಗ್ಯವಾಗಿದೆಯಾ? ಎಂದು ಸಭೆಯಲ್ಲಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಡಾ.ದೇವರಾಜು ಅವರನ್ನು ಪ್ರಶ್ನಿಸಿದರು. ಕಾರ್ಖಾನೆಗಳ ಪರಿಸರ ಮಾಲಿನ್ಯ ಸಮಸ್ಯೆ ಬಗೆಹರಿದು ಕಾರ್ಖಾನೆ ಸುತ್ತಲ ರೈತರ ಬದುಕು ಹಸನಾಗುವಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನೈಜ ವರದಿ ತಯಾರಿಸಿ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು ಕಾರ್ಖಾನೆಗಳ ಪರಿಸರ ಮಾಲಿನ್ಯದ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸದಿದ್ದರೆ ಕಲುಷಿತ ನೀರಿನ ಬಾಟಲುಗಳನ್ನು ಶಾಸನಸಭೆಯಲ್ಲಿ ಪ್ರದರ್ಶಿಸಿ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಪ್ರಸ್ತಾಪಿಸುವುದಾಗಿ ಎಚ್ಚರಿಸಿದರು.


ಕಾಲುವೆ ರಸ್ತೆಗಳ ಒತ್ತುವರಿ ತೆರವುಗೊಳಿಸಿ: ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಹೇಮಾವತಿ ವಿತರಣಾ ನಾಲೆಗಳು ಹಾದುಹೋಗಿವೆ. ಸದರಿ ನಾಲೆಗಳ ಎರಡೂ ಬದಿಗಳಲ್ಲಿ ನೀರಾವರಿ ಇಲಾಖೆ ಭೂಸ್ವಾಧೀನ ಮಾಡಿಕೊಂಡಿರುವ ನಾಲಾ ಏರಿ ಮತ್ತು ಸರ್ವಿಸ್ ರಸ್ತೆ ಜಾಗವಿದೆ. ಸದರಿ ನಾಲಾ ಏರಿ ಮತ್ತು ಸರ್ವೀಸ್ ರಸ್ತೆಗಳನ್ನು ಒತ್ತುವರಿ ಮಾಡಿಕೊಂಡು ಪಟ್ಟಣ ವ್ಯಾಪ್ತಿಯಲ್ಲಿ ಕೆಲವರು ಮನೆಗಳನ್ನು ನಿರ್ಮಿಸುತ್ತಿದ್ದಾರೆ. ನೀರಾವರಿ ಇಲಾಖೆಯ ಎಂಜಿನಿಯರುಗಳು ಕಾಲುವೆ ಏರಿಗಳ ಮೇಲೆ ಸಂಚರಿಸಿ ಅಕ್ರಮ ಮನೆ ನಿರ್ಮಾಣದ ವಿರುದ್ದ ಕ್ರಮವಹಿಸಬೇಕು. ಪಟ್ಟಣ ವ್ಯಾಪ್ತಿಯಲ್ಲಿ ಹಾದುಹೋಗಿರುವ ನಾಲೆಗಳಿಗೆ ಮಾಡಿಕೊಂಡಿರುವ ಭೂ ಸ್ವಾಧೀನದ ಜಾಗವನ್ನು ಅಳತೆ ಮಾಡಿಸಿ ಸರ್ಕಾರಿ ಆಸ್ತಿಯ ಸಂರಕ್ಷಣೆಗೆ ಕ್ರಮ ವಹಿಸುವಂತೆ ಶಾಸಕ ಹೆಚ್.ಟಿ.ಮಂಜು ಸೂಚಿಸಿದರು.


ತಾಪಂ ಆಡಳಿತಾಧಿಕಾರಿ ಆಶಾ, ತಾಪಂ ಇಒ ಸುಷ್ಮಾ, ಗ್ರೇಡ್2 ತಹಸೀಲ್ದಾರ್ ಲೋಕೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಕುಮಾರ್, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.