Home ಸಿನೆಮಾ ಪರಿಸರ ಕಾಳಜಿಯ ಸಂದೇಶ ಹೊತ್ತ ‘ತಿಕ್ಲುರಾಮ’

ಪರಿಸರ ಕಾಳಜಿಯ ಸಂದೇಶ ಹೊತ್ತ ‘ತಿಕ್ಲುರಾಮ’

ಕಾದಂಬರಿಯಿಂದ ಸಿನಿಮಾಗೆ..

ಪ್ರಕೃತಿ, ಪರಿಸರ ಮತ್ತು ಮಾನವೀಯ ಮೌಲ್ಯಗಳ ಸುತ್ತ ಹೆಣೆಯಲಾದ ‘ತಿಕ್ಲುರಾಮ’ ಕಾದಂಬರಿ ಇದೀಗ ಸಿನಿಮಾರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಡಾ. ನಟರಾಜ್ ರಚಿಸಿರುವ ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಚಿತ್ರದ ಚಿತ್ರೀಕರಣ ಈಗಾಗಲೇ ಶೇಕಡ 40ರಷ್ಟು ಪೂರ್ಣಗೊಂಡಿದ್ದು, ಇತ್ತೀಚೆಗೆ ಮಂತ್ರಿ ಮಾಲ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಪದ್ಮಶ್ರೀ ಡಾ. ದೊಡ್ಡರಂಗೇಗೌಡ, ಕೆ. ಸುಚೇಂದ್ರ ಪ್ರಸಾದ್, ಸಾಹಿತಿ ಹಾಗೂ ನಿರ್ದೇಶಕ ಬಿ. ಶಿವಾನಂದ ಮತ್ತು ಡಾ. ಭರತ್ ಉದ್ಘಾಟಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಚಿತ್ರಕ್ಕೆ ಮಂಜುಕವಿ ನಿರ್ದೇಶನ ಮಾಡುತ್ತಿದ್ದು, ಡಾ. ರಾಜವೀರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಕರಿಷ್ಮ–ಶ್ರಾವ್ಯ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶೃತಿ ಜಿ.ಬಿ ಹಾಗೂ ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ತಾರಾಗಣದಲ್ಲಿ ಕೆ. ಸುಚೇಂದ್ರ ಪ್ರಸಾದ್, ಜಹಾಂಗೀರ್, ಚೈತ್ರರಾಮ್, ಹಾಸ್ಯನಟ ಗಿರೀಶ್ ಸೇರಿದಂತೆ ವಿನೋದ್ ಪವಿತ್ರ, ನಿಖಿತ ಸ್ವಾಮಿ ಹಾಗೂ ಶ್ರಾವ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಜುಕವಿ, “ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದು. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಥೆಯನ್ನು ರೂಪಿಸಿದ್ದೇವೆ. ಪ್ರಕೃತಿ ಮನುಷ್ಯನಿಗೆ ನೀಡಿರುವ ಮಹತ್ವವನ್ನು ಚಿತ್ರದಲ್ಲಿ ತೋರಿಸಲಾಗಿದೆ” ಎಂದರು. ಚಿತ್ರಕ್ಕೆ ಹೊಸ ಶೀರ್ಷಿಕೆ ಇಡುವ ಯೋಜನೆ ಇರುವುದನ್ನೂ ಅವರು ತಿಳಿಸಿದರು.

ಲೇಖಕ ಡಾ. ನಟರಾಜ್ ಮಾತನಾಡಿ, “ಇಂಜಿನಿಯರಿಂಗ್ ಓದಿದ ನಾನು ಕಥೆಗಾರನಾಗಿರುವುದು ನನಗೂ ಅಚ್ಚರಿ. ಶಾಲಾ ದಿನಗಳಲ್ಲಿ ಡಾ. ದೊಡ್ಡರಂಗೇಗೌಡ ಅವರ ಪ್ರವಚನಗಳಿಂದ ಪ್ರೇರಣೆ ಸಿಕ್ಕಿತ್ತು. ಸರ್ಕಾರಿ ಸೇವೆಯಲ್ಲಿ ಕಂಡ ಜೀವನ ಅನುಭವಗಳೇ ಈ ಕಾದಂಬರಿಯ ಅಡಿಪಾಯ” ಎಂದರು. ‘ತಿಕ್ಲುರಾಮ’ ಎಂಬ ಹೆಸರಿನ ಹಿಂದೆ ಇರುವ ಅರ್ಥವನ್ನೂ ಅವರು ವಿವರಿಸಿದರು.

ಡಾ. ದೊಡ್ಡರಂಗೇಗೌಡ ಮಾತನಾಡಿ, “ಕನ್ನಡ ಸಾಹಿತ್ಯವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. ‘ತಿಕ್ಲುರಾಮ’ ಕಾದಂಬರಿ ಮನಸಿಗೆ ತಾಕುವಂತಿದೆ. ಇದರ ಸಿನಿಮಾ ರೂಪ ನೋಡಲು ಕಾತುರನಾಗಿದ್ದೇನೆ” ಎಂದು ಹೇಳಿದರು.

ಕೆ. ಸುಚೇಂದ್ರ ಪ್ರಸಾದ್ ಮಾತನಾಡಿ, “ಗ್ರಾಮೀಣ ಸೊಗಡು ಮತ್ತು ಪರಿಸರ ಕಾಳಜಿ ಈ ಪುಸ್ತಕದ ವಿಶೇಷತೆ. ಸಾಹಿತ್ಯದಿಂದ ಸಿನಿಮಾಗೆ ಬರುತ್ತಿರುವುದು ಮಾದರಿಯ ಕೆಲಸ. ಇಂತಹ ಕೃತಿಗಳು ನಿರಂತರವಾಗಿ ಬರಬೇಕು” ಎಂದು ಅಭಿಪ್ರಾಯಪಟ್ಟರು.