
ಪುತ್ತೂರು: ಕೇಂದ್ರ ಸರ್ಕಾರ ವಿಕಸಿತ ಭಾರತದ ಕಲ್ಪನೆಗೆ ಪೂರಕವಾಗಿ ಮನರೇಗಾ ಕಾಯ್ದೆಯನ್ನು ಪರಿಷ್ಕರಿಸಿದೆ. ಆದರೆ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದೇ ಜನ್ಮಸಿದ್ಧ ಹಕ್ಕು ಎಂದು ಕಾಂಗ್ರೇಸ್ ಭಾವಿಸಿದೆ. ಮನರೇಗಾ ಯೋಜನೆ ಪರಿಣಾಮಕಾರಿ ಅನುಷ್ಟಾನವಾಗದ ಕಾರಣಕ್ಕಾಗಿ ಇದರಲ್ಲಿ ಬದಲಾವಣೆ ತಂದಿದೆ. ಕಾಂಗ್ರೇಸ್ ಈ ಯೋಜನೆಯ ವಿರುದ್ಧ ಬೀದಿಗಿಳಿದು ಬೀದಿರಂಪಾಟ ನಡೆಸುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈಗಾಗಲೇ ಓಟ್‌ಚೋರಿ, ಎಸ್‌ಐಆರ್ ಮತ್ತು ಕೇಂದ್ರ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಅಪಪ್ರಚಾರ ನಡೆಸಿ ಮುಖಕ್ಕೆ ಮಸಿ ಬಳಿದುಕೊಂಡಿರುವ ಕಾಂಗ್ರೇಸ್ ಇದೀಗ ವಿಕಸಿತ ಭಾರತ ಉದ್ಯೋಗ ಮತ್ತು ಅಜೀವಿಕ ಮಿಷನ್ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದು ಕಾಂಗ್ರೇಸಿನ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.
ಕೂಳಿಗಾಗಿ ಕಾಳು ಎಂದು ಮೊರಾರ್ಜಿದೇಸಾಯಿ ತಂದಿದ್ದ ಯೋಜನೆಯನ್ನು ಹಲವು ಸಾರಿ ಹೆಸರು ಬದಲಾವಣೆ ಮಾಡಿರುವುದು ಕಾಂಗ್ರೇಸ್ ಸರ್ಕಾರ. ಮನರೇಗಾದಲ್ಲಿ ಒಂದಷ್ಟು ಭ್ರಷ್ಟಾಚಾರ ಆಗುತ್ತಿದ್ದ ಹಿನ್ನಲೆಯಲ್ಲಿ ಬದಲಾದ ಕಾಲಘಟ್ಟಕ್ಕೆ ಸರಿಯಾಗುವಂತೆ ಪರಿಷ್ಕರಿಸಿ ವಿಬಿಜಿರಾಮ್ ಜಿ ಎಂಬ ಕಾಯ್ದೆಯನ್ನು ಜಾರಿಗೊಳಿಸಿದೆ. ೧೦೦ ದಿನಗಳ ಬದಲಿಗೆ ೧೨೫ ದಿನಗಳ ಕೂಲಿ ಅವಕಾಶ ನೀಡಿದೆ. ಯೋಜನೆಯಲ್ಲಿ ಗ್ರಾಮೀಣ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಹಂಚಿಕೆಯಲ್ಲಿ ೬೦; ೪೦ ಮಾಡಲಾಗಿದೆ. ಜಿಪಿಎಸ್ ತಂತ್ರಜ್ಞಾನದ ಅಳವಡಿಕೆ ಮೂಲಕ ಪಾರದರ್ಶಕ ಯೋಜನೆಯನ್ನು ತರಲಾಗಿದೆ. ಕನಾಟಕ ರಾಜ್ಯಕ್ಕೆ ಪ್ರಸ್ತುತ ದಿವಾಳಿಯಾಗಿದೆ. ಶೇ.೪೦ ಭರಿಸುವ ಚೈತನ್ಯ ಇಲ್ಲ. ಹಾಗಾಗಿ ಯೋಜನೆ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
. ಸ್ವಾತಂತ್ರ ಸಿಕ್ಕಿ ೧೦೦ ವರ್ಷ ಆಗುವ ಸಂದರ್ಭ ವಿಕಸಿತಭಾರತದೊಂದಿಗೆ ವಿಕಸಿತ ಪಂಚಾಯತ್ ಆಗಬೇಕೆಂಬ ದೂರದೃಷ್ಟಿಯಿಂದ ಈ ಯೋಜನೆಗೆ ಹೆಸರು ಬದಲಾಯಿಸಲಾಗಿದೆ. ಬಿಜೆಪಿಯ ಕೇಂದ್ರ ಸರ್ಕಾರ ಇದಕ್ಕೆ ಯಾವುದೇ ನೇತಾರರ ಹೆಸರಿಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ತಾಪಂ ಜಿಪಂ ಹಾಗೂ ಗ್ರಾಪಂ, ಎಪಿಎಂಸಿ ಚುನಾವಣೆಗಳನ್ನು ಮಾಡುತ್ತಿಲ್ಲ. ಪಂಚಾಯತ್ ಗಳನ್ನು ಸಬಲೀಕರಣ ಮಾಡುವ ಉದ್ದೇಶ ಇಲ್ಲ. ಜನರ ಹಿತ ಕಾಯುವ ಚಿಂತನೆ ಇಲ್ಲ. ತಮ್ಮ ಕುರ್ಚಿ ಕಾದಾಟವನ್ನು ಮರೆಮಾಚುವ ಉದ್ದೇಶದಿಂದ ಬೀದಿಗಿಳಿದು ಯೋಜನೆ ವಿರುದ್ದ ಅಪಪ್ರಚಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಭಟ್, ನಾಗೇಶ್ ಟಿ.ಎಸ್ ಉಪಸ್ಥಿತರಿದ್ದರು.






























