
ಸಂಜೆವಾಣಿ ನ್ಯೂಸ್
ಮೈಸೂರು, ಅ.17: ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಹಿರಿದಾಗಿದ್ದು, ನಮ್ಮ ರಕ್ತದ ಧಮನಿ-ಧಮನಿಗಳಲ್ಲಿ ಪರಂಪರೆ ಇರಬೇಕು ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಡಾ. ಪಿ. ಶಿವರಾಜು ಅವರು ಹೇಳಿದರು.
ನಗರದ ರಂಗ ಚಾರ್ಲು ಭವನದ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ಟಾಂಗಾ ಸವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಾರಂಪರಿಕ ಟಾಂಗಾ ಸವಾರಿ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸಲು ಪೂರಕವಾಗಿದೆ. ಈ ವೇಷಭೂಷಣಗಳು ಮುಂದಿನ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ನಾವು ಆಧುನಿಕ ಉಡುಗೆ-ತೊಡುಗೆಗಳಲ್ಲಿದ್ದರೂ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳು ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಸಾರಲು ಮುಖ್ಯ ಕಾರಣವಾಗಿವೆ.
ಪರಂಪರೆಯನ್ನು ಇಡೀ ವಿಶ್ವದಾದ್ಯಂತ ಪ್ರಸಾರ ಮಾಡಲು ಇಲಾಖೆಯೊಂದಿಗೆ ಸಾರ್ವಜನಿಕರು ಹಾಗೂ ಕನ್ನಡಿಗರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಚಲನಚಿತ್ರ ಖ್ಯಾತ ನಟಿ ಹಾಗೂ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರು ಮಾತನಾಡಿ, ಮೈಸೂರಿನಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ಹಾಗೂ ದಸರಾ ಹಬ್ಬದ ಸಡಗರ ಕಳೆಗಟ್ಟಿದೆ. ದಂಪತಿಗಳು ಯಾವುದೇ ಮದುವೆ ಅಥವಾ ವಿಶೇಷ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಪರಸ್ಪರ ಚರ್ಚಿಸಿ, ಯಾವ ಬಟ್ಟೆ ಧರಿಸಬೇಕು ಎಂಬುದನ್ನು ನಿರ್ಧರಿಸುವ ಅಪರೂಪದ ಕ್ಷಣಗಳು ಇಲ್ಲಿ ಎದ್ದು ಕಾಣುತ್ತಿವೆ. ಮೈಸೂರು ಸಿಲ್ಕ್ ಸೀರೆಗಳು ಮತ್ತು ಸಾಂಪ್ರದಾಯಿಕ ಉಡುಪುಗಳ ಮೇಲಿನ ಒಲವು ಈ ಕಾರ್ಯಕ್ರಮಗಳಲ್ಲಿ ಮತ್ತಷ್ಟು ಮೆರುಗು ತಂದುಕೊಟ್ಟಿದೆ ಎಂದರು.
ಈ ರೀತಿಯ ಸಿದ್ಧತೆಗಳು ಕೇವಲ ಕಾರ್ಯಕ್ರಮದ ದಿನಕ್ಕೆ ಮಾತ್ರ ಸೀಮಿತವಾಗಿರದೆ, ಹಿಂದಿನ ವಾರದಿಂದಲೇ ಜೋರಾಗಿ ಚರ್ಚೆಗೆ ಗ್ರಾಸವಾಗುತ್ತವೆ. ಮನೆಯಲ್ಲೂ ದಂಪತಿಗಳು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ, ಮುಂಬರುವ ಕಾರ್ಯಕ್ರಮಗಳ ಬಗ್ಗೆ ಉತ್ಸಾಹದಿಂದ ಮಾತನಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.
ಈ ವಾತಾವರಣವು ಎಲ್ಲರ ಮುಖದಲ್ಲೂ ನಗು ಮೂಡಿಸುವುದರೊಂದಿಗೆ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾದ ಪಿಳೈ ಅಯ್ಯಂಗಾರ್ ಅವರು ಮಾತನಾಡಿ, 2008ರಲ್ಲಿ ಯುನೆಸ್ಕೋ ಸಂಸ್ಥೆಯು ವಿಶ್ವದ ಅತ್ಯಂತ ಪ್ರಾಚೀನ ಪದ್ಧತಿಗಳ ಅಮೂರ್ತ ಪರಂಪರೆಯನ್ನು ಗುರುತಿಸಿದ್ದು, ಅದೇ ರೀತಿಯಲ್ಲಿ ಮೈಸೂರು ದಸರಾವನ್ನು ಕೂಡ ವಿಶ್ವ ಪರಂಪರೆ ಎಂದು ಗುರುತಿಸಬೇಕು ಎಂದು ಹೇಳಿದರು.
ಅರಮನೆ ಹಾಗೂ ಕಟ್ಟಡಗಳಂತಹ ಮೂರ್ತ ಪರಂಪರೆಯ ಜೊತೆಗೆ, ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಗೊಂಬೆ ಇಡುವಿಕೆ, ಪರಂಪರಾಗತ ಉಡುಪುಗಳು ಮತ್ತು ಆನೆ ಅಂಬಾರಿ ಉತ್ಸವದಂತಹ ಅಮೂರ್ತ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಂಪತಿಗಳು ವಿವಿಧ ರೀತಿಯ ಉಡುಪುಗಳನ್ನು ಧರಿಸಿ ಟಾಂಗಾ ಸವಾರಿ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು.
ಕಾರ್ಯಕ್ರಮದಲ್ಲಿ ಇಲಾಖೆ ಉಪ ನಿರ್ದೇಶಕರಾದ ಡಾ. ಸಿ.ಎನ್. ಮಂಜುಳಾ ಮತ್ತು ನಿವೃತ್ತ ಉಪನ್ಯಾಸಕರಾದ ರಂಗರಾಜು ಮತ್ತಿತರರು ಉಪಸ್ಥಿತರಿದ್ದರು.
























