ಪತ್ರಿಕೆಗಳು ಪ್ರತಿಪಕ್ಷಗಳಂತೆ ಕಾರ್ಯ ನಿರ್ವಹಿಸಬೇಕು

ಸಂಜೆವಾಣಿ ನ್ಯೂಸ್
ಮೈಸೂರು, ಮೇ.30:-
ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಪತ್ರಿಕೆಗಳು ಪ್ರತಿಪಕ್ಷಗಳಂತೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಅಂಕು, ಡೊಂಕು ತಿದ್ದುವ ಮೂಲಕ ಜನರ ಧ್ವನಿಯಾಗಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.


ಮಾನಸ ಗಂಗೋತ್ರಿಯ ಜರ್ನೋತ್ರಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕೀರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವ್ಯಕ್ತಿಯ ಸ್ಪೂರ್ತಿದಾಯಕ ಪ್ರಯಾಣ ಆಧರಿಸಿದೆ. ಶತ ಶತಮಾನದಿಂದಲೂ ಭಾರತ ದೇಶದಲ್ಲಿರುವ ಜಾತಿ ವ್ಯವಸ್ಥೆ ಮೀರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಹೊಂದಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಹಾಗೂ ಹೋರಾಟವನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.


ಅಂಬೇಡ್ಕರ್ ಕುರಿತು ಸ್ಥಾಪಿತ ಕಲ್ಪನೆಯಿದ್ದು, ಮೀಸಲಾತಿ ಹಾಗೂ ದಲಿತರಿಗಷ್ಟೇ ಮೀಸಲು ಮಾಡಲಾಗಿದೆ. ಅದರ ಹೊರತಾಗಿ ಅವರಿಗಿರುವ ಅಪಾರ ಅರ್ಹತೆಗಳ ಚಿಂತನೆ ನಡೆದಿಲ್ಲ. ಅವರು ತಮ್ಮ ಜೀವಿತಾವಧಿಯ 36 ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಶೋಷಿತರ ಧ್ವನಿಯಾಗಿ ಪತ್ರಿಕೆಗಳನ್ನು ಆರಂಭಿಸಿದ್ದರು. ಹೀಗಾಗಿಯೇ ಆ ಪತ್ರಿಕೆಗಳ ಹೆಸರೂ ಕ್ರಾಂತಿಕಾರಿಯಾಗಿದ್ದವು, ಆದರೆ, ಪ್ರಸ್ತುತ ಶೋಷಿತರಿಗೆ ಯಾವುದಾದರು ಪತ್ರಿಕೆ ಓದಿದಾಗ ಅದು ನಮ್ಮ ಪತ್ರಿಕೆ ಎಂಬ ಆಪ್ತತೆ ಭಾವನೆ ಬರುತ್ತಿಲ್ಲ ಎಂದು ಹೇಳಿದರು.


ಅಂಬೇಡ್ಕರ್ ನಾನು ಆರಂಭಿಸಿದ ಪರಿವರ್ತನೆಗಳನ್ನು ಮುಂದಕ್ಕೆ ಕೊಂಡೊಯ್ಯಿರಿ ಎಂದಿದ್ದರು. ಆದರೆ, ಈಗ ನಾವು ಅದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿದ್ದೇವೆ. ಮಾಧ್ಯಮ ಸಂಸ್ಥೆಯ ನಿರ್ಣಾಯಕ ಸ್ಥಾನಮಾನಗಳಲ್ಲಿ ಎಷ್ಟು ಜನ ದಲಿತರಿದ್ದಾರೆ ಎಂಬುದು ಹಿನ್ನಡೆ ಎತ್ತಿ ತೋರಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ಎಲ್ಲಾ ಜನವರ್ಗ, ಅನುಭವ ಲೋಕವಿದ್ದಾಗ ಆ ಕ್ಷೇತ್ರ ಪರಿಪೂರ್ಣವಾಗುತ್ತದೆ. ಈ ಅಂಶ ಇಲ್ಲದೆ ಪತ್ರಿಕೋದ್ಯಮ ವಿಕಲಾಂಗವಾಗಿದೆ ಎಂದು ತಿಳಿಸಿದರು.


ಸಾಹಿತ್ಯ ಕ್ಷೇತ್ರದಲ್ಲಿ ನೂರಾರು ದಲಿತರನ್ನು ಕಾಣಲು ಸಾಧ್ಯ. ಆದರೂ ಪತ್ರಿಕೋದ್ಯಮದಲ್ಲಿ ಆ ಸಂಖ್ಯೆ ಯಾಕೆ ಇಲ್ಲ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಅಮೇರಿಕಾದಲ್ಲೂ ಇದೇ ರೀತಿ ಕರಿಯರ ಪ್ರಾತಿನಿಧ್ಯ ಮಾಧ್ಯಮ ಕ್ಷೇತ್ರದಲ್ಲಿ ಕಡಿಮೆ ಇತ್ತು. ಅದಕ್ಕಾಗಿ ಎಲ್ಲರೂ ಒಂದಾಗಿ ಇತರರನ್ನು ಪೆÇ್ರೀತ್ಸಾಹಿಸಿದರು. ಈ ಕಾರಣಕ್ಕೆ 2010ರಲ್ಲಿ ಅಲ್ಲಿನ ಮಾಧ್ಯಮದಲ್ಲಿ ಶೇ.12ರಷ್ಟು ಕರಿಯರು ಇದ್ದರು. ಈ ರೀತಿಯ ಬದಲಾವಣೆಗಳು ಆಗಬೇಕು. ಮೀಸಲಾತಿ ಇಲ್ಲದ ಕಡೆ ದಲಿತರಿಗೆ ಸ್ಥಾನಮಾನವಿಲ್ಲ ಎಂಬ ವ್ಯವಸ್ಥೆ ತೊಲಗಬೇಕು ಎಂದು ಹೇಳಿದರು.


ಮಾಧ್ಯಮಗಳು ಹುಟ್ಟುಹಾಕುವ ಚಳವಳಿಗಳನ್ನು ಅವುಗಳೇ ಸಾಯಿಸುತ್ತವೆ. ನಿರ್ಭಯ ಪ್ರಕರಣ ನಡೆದ ವರ್ಷ ದೇಶದಲ್ಲಿ 1,700 ಅತ್ಯಾಚಾರ ಪ್ರಕರಣಗಳು ನಡೆದಿದ್ದವು. ಆದರೂ ರಾಜಕೀಯ ಕಾರಣಕ್ಕಾಗಿ ನಿರ್ಭಯ ಪ್ರಕರಣವನ್ನಷ್ಟೇ ಮುನ್ನೆಲೆಗೆ ತರಲಾಯಿತು. ಉಳಿದ ಪ್ರಕರಣಗಳ ನ್ಯಾಯಕ್ಕಾಗಿ ಮಾಧ್ಯಮಗಳು ಯಾಕೆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದರು.


ಈ ರೀತಿಯ ಕಾರ್ಯ ಪ್ರಶ್ನಿಸದಿದ್ದಾಗ ಮಾಧ್ಯಮ ನಮ್ಮದು ಅನಿಸುವುದಿಲ್ಲ. ಹೀಗಾಗಿ ಎಲ್ಲಾ ವರ್ಗದ ಜನರು ಪತ್ರಿಕೋದ್ಯಮದಲ್ಲಿ ಇರಬೇಕು. ಪತ್ರಿಕೆಗೆ ಓದುಗರು ಒಡೆಯರಾಗಬೇಕೇ ಹೊರತು ಜಾಹೀರಾತುದಾರರಲ್ಲ. ಆದರೆ ಈಗ ಸುದ್ದಿಗಿಂತ ಜಾಹೀರಾತು ಮುಖ್ಯವಾಗಿದೆ. ಸುದ್ದಿ ಉಚಿತವಾಗಿ ಹರಿದಾಡುತ್ತಿರುವುದರಿಂದ, ಅದರ ಹಸಿವು ಕಡಿಮೆ ಇದೆ. ಈ ಕಾಲಘಟ್ಟದಲ್ಲಿ ಅಂಬೇಡ್ಕರ್ ಆಶಯ ಈಡೇರಿಸುವ ಹೊಸ ಹಾದಿ ಹುಡುಕಬೇಕಿದೆ ಎಂದು ಸಲಹೆ ನೀಡಿದರು.


ಪ್ರಸ್ತುತ ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಹೆಚ್ಚಾಗುತ್ತಿದೆ. ಈಚೆಗೆ ನಡೆದ ಆಪರೇಷನ್ ಸಿಂಧೂರ್‍ನಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾಗಿ ಘೋಷಿಸಿಕೊಂಡರು. ಇದಕ್ಕೆ ಮೋದಿ ಉತ್ತರವನ್ನೇ ನೀಡಲಿಲ್ಲ. ಆ ದಾಳಿಯನ್ನು ಪಹಲ್ಗಾಮ್‍ನಲ್ಲಿನ ಪ್ರವಾಸಿಗರ ಮೇಲಿನ ದಾಳಿಯ ಪ್ರತೀಕಾರವೆಂದು ಹೇಳಲಾಗಿತ್ತು. ಆದರೆ, ಅಲ್ಲಿ ದಾಳಿ ಮಾಡಿದ ಉಗ್ರರು ಏನಾದರು, ಅವರನ್ನು ಸಾಯಿಸಲಾಯಿತೆ ಎಂಬ ವಿಚಾರಗಳಿಗೆ ಇನ್ನೂ ಉತ್ತರ ದೊರಕಿಲ್ಲ. ಇವುಗಳನ್ನು ಪ್ರಶ್ನಿಸುವ ಪತ್ರಕರ್ತರ ಅಗತ್ಯವಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಸಿಂಡಿಕೇಟ್ ಸದಸ್ಯ ನಟರಾಜ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಎಂ.ಮಮತಾ, ಪ್ರಾಧ್ಯಾಪಕರಾದ ಸಿ.ಕೆ.ಪುಟ್ಟಸ್ವಾಮಿ, ಎಂ.ಎಸ್.ಸ್ವಪ್ನಾ ಇದ್ದರು.