
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಅ,3- ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವೇಣಿ ಲೋಕನಾಥ(76) ಅವರು ನಿನ್ನೆ ಸಂಜೆ ನಿಧನರಾಗಿದ್ದು ಇಂದು ನಗರದ ಹರಿಶ್ಚಂದ್ರಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಿತು.ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ.
ತಮ್ಮ 17 ನೇ ವಯಸ್ಸಿನಿಂದಲೇ ವಾರ್ತಾ ಇಲಾಖೆಯ ಪತ್ರಿಕಾ ಛಾಯಗ್ರಾಹಕರಾಗಿ ಲೋಕನಾಥ ಅವರ ಸೇವೆ ಆರಂಭಗೊಂಡಿತ್ತು. ಐದಯ ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ಛಾಯಾಗ್ರಾಹಕರಾಗಿದ್ದ ಅವರು ನಗರದ ಅನೇಕ ಗಣ್ಯರ, ಜಿಲ್ಲೆಯ ಪ್ರಮುಖ ಘಟನಾವಳಿಗಳ ದೃಶ್ಯಗಳನ್ನು ಸೆರೆಹಿಡಿದಿದ್ದ ಖ್ಯಾತಿ ಅವರದ್ದಾಗಿತ್ತು.
ತೋರಗಲ್ಲಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ವಿಜಯನಗರ ಉಕ್ಕಿನ ಕಾರ್ಖಾನೆಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಭೂಮಿ ಪೂಜೆ ಮಾಡಿದ್ದ ಪೋಟು ಕ್ಲಿಕ್ಸಿಕಿದ್ದರು.
ಹೀಗೆ ಬಿಟಿಪಿಎಸ್ ಗೆ ಭೂಮಿ ಪೂಜೆ, ಹಂಪಿ ಉತ್ಸವ, ಹಗರಿ ಸೇತುವೆಯ ಉದ್ಘಾಟನೆ
ಸೇರಿದಂತೆ ಅನೇಕ ಪ್ರಮುಖ ಘಟನೆಗಳಿಗೆ ಇವರು ಛಾಯಾಗ್ರಾಹಕರಾಗಿ ಸಾಕ್ಷಿಯಾಗಿದ್ದರು. ಜಿಲ್ಲೆಯ ಜನಪ್ರತಿನಿಧಿಗಳಾಗಿದ್ದ, ಎಂ.ವೈ.ಘೋರ್ಪಡೆ, ಎಂ.ಪ್ರಕಾಶ್, ಬಸವರಾಜೇಶ್ವರಿ, ಅಲ್ಲಂ, ಮುಂಡ್ಲೂರು ಕುಟುಂಬ, ರೆಡ್ಡಿ ಸಮೂಹಕ್ಕೆ ಹಾಗು ಉನ್ನತ ಅಧಿಕಾರಿಗಳನ್ನು ಹತ್ತಿರದಿಂದ ಬಲ್ಲವರಾಗಿದ್ದರು.
ಕೆಲಸದ ವಿಷಯದಲ್ಲಿ ಗರ್ವಿಯಾಗಿದ್ದರೂ, ಯಾರೇ ಯಾವುದೇ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದರೆ ಅವರ ಸಹಕಾರಕ್ಕೆ ಸದಾ ಮುಂದೆ ಇರುತ್ತಿದ್ದರು.
ಅವರು ಇಲ್ಲವಾದರೂ ಅವರ ತೆಗೆದ ಜಿಲ್ಲೆಯ ಅನೇಕ ಛಾಯಾಚಿತ್ರಗಳು ಸದಾ ಸ್ಮರಣೀಯವಾಗಿವೆ.
ಶೋಕ:
ಲೋಕನಾಥ ಅವರ ನಿಧನಕ್ಕೆ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಗಾಲಿ ಜನಾರ್ಧನರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು, ಬ್ಯಾಹ್ಮಣ ಸಂಘದ ಡಾ.ಸುಂದರ್, ಪ್ರಕಾಶ್ ರಾವ್, ಬಿ.ಕೆ.ಬಿ.ಎನ್.ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಅವರ ಒಡನಾಡಿಗಳಾಗಿದ್ದ, ಜಿ.ಪ್ರಭಾಕರ್, ಎಂ.ಅಹಿರಾಜ್, ಮೊದಲಾದ ಪತ್ರಕರ್ತರು, ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.


























