
ಮಂಗಳೂರು : ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿರುವ ಪ್ರಸಿದ್ಧ ನೃತ್ಯ ಕಲಾವಿದರ ಸಂದರ್ಶನಗಳ ‘ಲಲಿತ ಮಂಟಪ’ ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಸಪ್ನ ಬುಕ್ ಹೌಸ್‌ನಲ್ಲಿ ಬುಧವಾರ ನಡೆಯಿತು.
ಪುಸ್ತಕ ಬಿಡುಗಡೆ ಮಾಡಿದ ನಿವೃತ್ತ ಕುಲಪತಿ, ಸಾಹಿತಿ ಡಾ.ಕೆ.ಚಿನ್ನಪ್ಪಗೌಡ ಮಾತನಾಡಿ ನಾಡಿನ ಬಹುಮುಖ್ಯ ಕಲಾವಿದರ ಸಂದರ್ಶಗಳ ಮೂಲಕ ಲಲಿತ, ಮಧುರ ಮತ್ತು ಸುಂದರ ಲೇಖನಗಳು ಲಲಿತ ಮಂಟಪದಲ್ಲಿದೆ. ಕಲಾವಿದರ ಬದುಕು ಮತ್ತು ಕಲಾ ಪ್ರಕಾರವನ್ನು ಬಗೆಯುವ ಕೆಲಸ ರಾಜಲಕ್ಷ್ಮಿ ಮಾಡಿದ್ದಾರೆ. ಪ್ರತಿಯೊಬ್ಬರ ಕಲಾವಿ ದರ ಬದುಕು ಕೂಡಾ ಅದ್ಭುತ. ಕಲೆಯ ವಿಸ್ಮಯ ಜಗತ್ತು ತೆರೆದುಕೊಂಡಿದೆ. ಕಲೆಗಳ ಗಂಭೀರ ಅಧ್ಯಯನಗಳಿವೆ. ನಾಟ್ಯ ಪರಂಪರೆ, ಕಲಾವಿದರ ತ್ಯಾಗ, ಸವಾಲುಗಳ ಸಮಗ್ರ ಮಾಹಿತಿ ಇದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು. ಈ ಸಂದರ್ಭ ಕೃತಿ ಆಧರಿಸಿದ ವಿನೂತನ ರಂಗ ಪ್ರಯೋಗ ಗೆಜ್ಜೆ ಬರೆದ ಅಕ್ಷರವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪ್ರಸ್ತುತಪಡಿಸಿದರು.
ರಾಕೇಶ್ ಹೊಸಬೆಟ್ಟು, ಪವಿತ್ರಾ ಮಯ್ಯ ಸಹಕರಿಸಿದರು. ಕೃತಿಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಸ್ವಾಗತಿಸಿದರು. ಲೇಖಕಿ ದೇವಿಕಾ ನಾಗೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.























