Home ಜಿಲ್ಲೆ ಮೈಸೂರು ಪಠ್ಯ ಪುಸ್ತಕಕ್ಕಷ್ಟೇ ಸೀಮಿತವಾಗದಿರಿ, ವಿಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶರದ್ ಶ್ರೀವಾಸ್ತವ

ಪಠ್ಯ ಪುಸ್ತಕಕ್ಕಷ್ಟೇ ಸೀಮಿತವಾಗದಿರಿ, ವಿಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶರದ್ ಶ್ರೀವಾಸ್ತವ

ಸಂಜೆವಾಣಿ ನ್ಯೂಸ್
ಮೈಸೂರು: ನ.01:-
ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಹಾಗೂ ಸೃಜನಶೀಲತೆ ಬೆಳೆಯಬೇಕಾದರೆ ಅವರು ಕೇವಲ ಪಠ್ಯಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಾಗದೆ, ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಮೈಸೂರಿನ ಬಾಬಾ ಪರಮಾಣು ಸಂಶೋಧನಾ ಕೇಂದ್ರದ (ಬಿಎಆರ್ಸಿ – ಆರ್‍ಎಂಪಿ) ಹಿರಿಯ ವಿಜ್ಞಾನಿ ಹಾಗೂ ಯೋಜನೆ ನಿರ್ದೇಶಕ ಶರದ್ ಸಿ. ಶ್ರೀವಾಸ್ತವ ತಿಳಿಸಿದರು.

ಇಲ್ಲಿನ ವಿಜಯನಗರದ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಆಯೋಜಿಸಲಾಗಿದ್ದ `ಅಂತರ ಶಾಲಾ ವಿಜ್ಞಾನ ಹಬ್ಬ 2026′ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಸಾಮಥ್ರ್ಯ ಬೆಳೆಸಲು ಪ್ರಾಯೋಗಿಕ ಕಲಿಕೆ ಅತ್ಯಂತ ಅಗತ್ಯ. ಓದಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದರಲ್ಲಿ ಹೆಚ್ಚಿನ ಅರ್ಥವಿದೆ. ಹೊಸ ಪ್ರಯೋಗಗಳನ್ನು ಕೈಗೊಳ್ಳುವುದರಿಂದ ಮಕ್ಕಳು ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಭಿನ್ನವಾಗಿ ಚಿಂತಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಎಲ್ಲರೂ ಸಾಗುವ ಹಾದಿಯಲ್ಲೇ ಸಾಗದೆ ‘ಔಟ್ ಆಫ್ ದಿ ಬಾಕ್ಸ್’ (ವಿಭಿನ್ನ) ಮನೋಭಾವ ಬೆಳೆಸಿಕೊಂಡಾಗ ಮಾತ್ರ ನೂತನ ಸಂಶೋಧನೆಗಳು ಸಾಧ್ಯ ಎಂದು ಪ್ರತಿಪಾದಿಸಿದ ಅವರು, ಯುವ ಮನಸ್ಸುಗಳಿಗೆ ವೇದಿಕೆ ಕಲ್ಪಿಸಿದ ಶಾಲಾ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

ಈ ವಿಜ್ಞಾನ ಹಬ್ಬದ ರಸಪ್ರಶ್ನೆ ಹಾಗೂ ಕ್ರಿಯಾತ್ಮಕ ಮಾದರಿ (ವರ್ಕಿಂಗ್ ಮಾಡೆಲ್) ಸ್ಪರ್ಧೆಗಳಲ್ಲಿ ಒಟ್ಟು 22 ಶಾಲೆಗಳ 298 ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಿರಿಯರ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಇಲವಾಲದ ಸಂತ ಜೋಸೆಫರ ಕೇಂದ್ರೀಯ ಶಾಲೆ ಪ್ರಥಮ, ಎಕ್ಸೆಲ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ಮೈಸೂರಿನ ಎನ್ ಪಿ ಎಸ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು. ಹಿರಿಯರ ರಸಪ್ರಶ್ನೆ ಸ್ಪರ್ಧೆಯಲ್ಲಿ ನೋಟ್ರೆ ಡೇಮ್ ಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಕ್ರೈಸ್ಟ್ ಪಬ್ಲಿಕ್ ಶಾಲೆ ದ್ವಿತೀಯ ಹಾಗೂ ನೋಟ್ರೆ ಡೇಮ್ ಶಾಲೆ ತೃತೀಯ ಸ್ಥಾನಗಳನ್ನು ಹಂಚಿಕೊಂಡವು.

ಅಂತೆಯೇ, ಕಿರಿಯರ ಕಾರ್ಯಾಚರಣೆ ಮಾದರಿ ಸ್ಪರ್ಧೆಯಲ್ಲಿ ಜಯಲಕ್ಷ್ಮಿಪುರಂನ ಸಂತ ಜೋಸೆಫರ ಕೇಂದ್ರೀಯ ಶಾಲೆ ಪ್ರಥಮ, ಮೈಸೂರಿನ ಎನ್ ಪಿ ಎಸ್ ಶಾಲೆ ದ್ವಿತೀಯ ಹಾಗೂ ಇಲವಾಲದ ಸಂತ ಜೋಸೆಫರ ಕೇಂದ್ರೀಯ ಶಾಲೆ ತೃತೀಯ ಸ್ಥಾನ ಗಳಿಸಿದವು. ಹಿರಿಯರ ವಿಭಾಗದಲ್ಲಿ ಆಚಾರ್ಯ ವಿದ್ಯಾ ಕುಲ ಪ್ರಥಮ, ಇಲವಾಲದ ಸಂತ ಜೋಸೆಫರ ಕೇಂದ್ರೀಯ ಶಾಲೆ ದ್ವಿತೀಯ ಮತ್ತು ಮೈಸೂರಿನ ಸಿ ಎಫ್ ಟಿ ಆರ್ ಐ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮೈಸೂರಿನ ಎನ್ ಪಿ ಎಸ್ (ಓPS) ಶಾಲೆ ‘ಸಮಗ್ರ ಚಾಂಪಿಯನ್’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಸಮಾರಂಭದಲ್ಲಿ ಎಂಡಿಇಎಸ್ ಕಾರ್ಯದರ್ಶಿ ವಂ. ಫಾ. ಎಡ್ವರ್ಡ್ ವಿಲಿಯಂ ಸಲ್ಡಾನ್ಹಾ, ಖಜಾಂಚಿ ಹಾಗೂ ಸಂಚಾಲಕ ವಂ. ಫಾ. ನವೀನ್ ಕುಮಾರ್, ಸಿಇಒ ಸೆಬಿ ಮಾವೇಲಿ, ಬಿಎಆರ್ಸಿ ಮಾಜಿ ಹಿರಿಯ ವಿಜ್ಞಾನಿ ಜೋಸೆಫ್ ಥಾಮಸ್ ಮತ್ತು ಆತಿಥೇಯ ಶಾಲೆಯ ಪ್ರಾಂಶುಪಾಲೆ ಎಲಿಜಬೆತ್ ಎಸ್. ಥಾಮಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.