ಪಂಜ ಗ್ರಾ.ಪಂ. ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಸುಳ್ಯ:ಪಂಜ ಗ್ರಾಮ ಪಂಚಾಯಿತಿಯಲ್ಲಿ ನಡೆದ ೧೩ ಲಕ್ಷ ರೂ ಅವ್ಯವಹಾರದಲ್ಲಿ ಪಾಲುದಾರರಾದ ಗ್ರಾ. ಪಂ. ನ ಉಪಾಧ್ಯಕ್ಷ, ಇತರೆ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಪಂಜ ವಲಯ
ಕಾಂಗ್ರೆಸ್ ಸಮಿತಿಗಳ ಜಂಟಿ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಂಜ ಪೇಟೆಯಲ್ಲಿ ಮೆರವಣಿಗೆಯಲ್ಲಿ ಹೊರಟ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪಂಜ ಬಸ್ ನಿಲ್ದಾಣದಲ್ಲಿ ಬಳಿ ಸಭೆ ಸೇರಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸ್ಥಳೀಯ ಸಂಸ್ಥೆಗಳಲ್ಲಿ ಅವ್ಯವಹಾರ ಮಿತಿಮೀರಿದೆ. ಒಂದು ಪಂಚಾಯಿತಿಯಲ್ಲಿ ೧೩ ಲಕ್ಷ ಅವ್ಯವಹಾರ ನಡೆಯುತ್ತದೆ ಎಂದರೆ ಅದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಇದರಲ್ಲಿ ಹಲವಾರು ಶಾಮೀಲಾಗಿದ್ದಾರೆ. ಇದರಲ್ಲಿ ಕೆಳವರ್ಗದವರನ್ನು ಸಿಲುಕಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ದೇಶಕ ಕೆ. ಪಿ. ಜಾನಿ, ಕಲ್ಲಡ್ಕ ಗ್ರಾ. ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್, ದಲಿತ ಮುಖಂಡ ಆನಂದ ಬೆಳ್ಳಾರೆ, ಪಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಮಾತನಾಡಿದರು.
ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಾಫ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್, ಕೆಪಿಸಿಸಿ ಸಂಯೋಜಕ ಜಿ. ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಲಡ್ಕ, ಬ್ಲಾಕ್ ಕಾಂಗ್ರೆಸ್ ಪ. ಪಂ. ವಿಭಾಗದ ಅಧ್ಯಕ್ಷ ಪರಮೇಶ್ವರ ಕೆಂಬಾರೆ, ಶ್ರೇಯಾಂಶ್ ಕುಮಾರ್, ಗಫೂರ್ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು
ಪ್ರತಿಭಟನೆಯ ಬಳಿಕ ಸುಳ್ಯ ಮತ್ತು ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಪಂಜ ವಲಯ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಪಂಜ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸೇರಿ ದಲಿತ ಸಮುದಾಯಕ್ಕೆ ಸೇರಿದ ನೌಕರನೊಬ್ಬನ ಅಮಾನತು ಕ್ರಮವನ್ನು ಖಂಡಿಸಿ, ನ್ಯಾಯಕ್ಕಾಗಿ ಮತ್ತು ನಿಜವಾದ ಇತರೆ ಅಪರಾಧಿಗಳ ಮೇಲೆ ಕೂಲಂಕುಷ ತನಿಖೆ ಹಾಗೂ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.