ಐವರ್ನಾಡಿನಲ್ಲಿ ಆರ್.ಎಸ್.ಎಸ್. ಸಂಘ ಶತಾಬ್ದಿ ಕಾರ್ಯಕ್ರಮ
ಸುಳ್ಯ:ಆರ್‌ಎಸ್‌ಎಸ್ ಸಂಘಟನೆಯ ೧೦೦ನೇ ವರ್ಷ ತುಂಬಿದೆ. ಈ ಶತಾಬ್ದಿಯ ಒಂದು ವರ್ಷದ ಅವಧಿಯಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಪಂಚ ಪರಿವರ್ತನೆಯ ಮೂಲಕ ಮತ್ತೆ ಆಮೂಲಾಗ್ರ ಬದಲಾವಣೆ ತರುವುದರ ಮುಖಾಂತರ ರಾಷ್ಟ್ರ ಜಗದ್ಗುರುವಾಗಿ ನಿಲ್ಲುವಂತೆ ಮಾಡುವ ಕೆಲಸ ಮಾಡಲಿದೆ ಎಂದು ಜಿಲ್ಲಾ ಪ್ರಚಾರಕ ಭುವನೇಶ್ವರ ಕಲ್ಲೇರಿ ಹೇಳಿದರು.
ವಿಜಯದಶಮಿ ದಿನವಾದ ಗುರುವಾರ ಆರ್.ಎಸ್.ಎಸ್. ಸಂಘ ಶತಾಬ್ದಿ ಪ್ರಯುಕ್ತ ಐವರ್ನಾಡು ಮಂಡಲದ ಐವರ್ನಾಡು, ಅಮರಪಡ್ನೂರು ಗ್ರಾಮದ ವತಿಯಿಂದ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾಂಗಣದಲ್ಲಿ ನಡೆದ ಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೌದ್ಧಿಕ್ ನೀಡಿ ಮಾತನಾಡಿದರು. ಸಂಘದಲ್ಲಿ ರಾಷ್ಟ್ರೀಯತೆಯ ಮೂಲಕ ದೇಶವನ್ನು ಕಟ್ಟುವಂತ ವ್ಯವಸ್ಥೆ ನಿರಂತರವಾಗಿ ಮುಂದೆಯು ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಡಾ.ಗೌರಿ ಶಂಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಆರ್.ಎಸ್.ಎಸ್. ಗಣವೇಶಧಾರಿಗಳು ಭಾಗವಹಿಸಿದರು.


























