ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕತಿಂಗಳಲ್ಲಿ ಕಾನೂನು ಪ್ರಕ್ರಿಯೆಪೂರ್ಣ ಪ್ರಿಯಾಂಕ್

ಬೆಂಗಳೂರು, ಆ. ೧೩- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ಕ್ಕೆ ಪ್ರಕರಣ-೧೯೯ ಬಿ ಮತ್ತು ೧೯೯ ಸಿ ಹೊಸ ಪ್ರಕರಣಗಳನ್ನು ಸೇರ್ಪಡೆ ಮಾಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನಮಂಡಲದ ಅನುಮೋದನೆ ಪಡೆದು ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಲಾಗಿದ್ದು, ಈ ಅಧಿನಿಯಮದ ಕಾನೂನು ರೂಪಿಸುವ ಪ್ರಕ್ರಿಯೆ ಇನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆಯಲ್ಲಿಂದು ಹೇಳಿದರು.


ಈ ತಿದ್ದುಪಡಿ ವಿಧೇಯಕಕ್ಕೆ ಕಾನೂನು ರೂಪಿಸುವ ಪ್ರಕ್ರಿಯೆ ವಿಳಂಬವಾದ ಕಾರಣ ಇ-ಸ್ವತ್ತು, ಬಿ ಖಾತೆ ನೀಡಿಕೆ ಪ್ರಕ್ರಿಯೆಗಳು ಆರಂಭವಾಗಲು ತಡವಾಗಿದೆ. ಈ ತಿದ್ದುಪಡಿ ವಿಧೇಯಕಕ್ಕೆ ನಿಯಮಗಳು ಅಂತಿಮಗೊಂಡ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ ೧೧ ಬಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಬಸನಗೌಡಪಾಟೀಲ್ ಯತ್ನಾಳ್ ಹಾಗೂ ಬಿಜೆಪಿಯ ದುರ್ಯೋಧನ ಐಹೊಳೆಯವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.


ಪಂಚಾಯ್ತಿಗಳಿಗೆ ಸ್ವಂತ ಇಂಧನ ಮೂಲಗಳನ್ನು ಸೃಷ್ಟಿಸಲು ಸರ್ಕಾರ ಆಯವ್ಯಯದಲ್ಲಿ ಮೈಕ್ರೋಗ್ರೆಡ್ ಯೋಜನೆಯನ್ನು ಅನುಷ್ಠಾನ ಮಾಡಿದೆ. ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕದ ೨ ಕಡೆ ಈ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆದಿದ್ದೇವೆ. ಈ ಯೋಜನೆ ಯಶಸ್ವಿಯಾದರೆ ಎಲ್ಲ ಕಡೆಯೂ ಯೋಜನೆಯನ್ನು ವಿಸ್ತರಿಸುತ್ತೇವೆ.

ಇದರಿಂದ ಪಂಚಾಯ್ತಿಗಳಿಗೆ ವಿದ್ಯುತ್ ಕೊರತೆ ಸಮಸ್ಯೆ ಕಾಡುವುದಿಲ್ಲ. ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿಕೊಳ್ಳಲು ಅವಕಾಶವಾಗಲಿದೆ ಎಂದು ಅವರು ಹೇಳಿದರು.
ಇ-ಖಾತೆ ವಿತರಣೆಯ ಸಂಬಂಧ ಇಂಟರ್‌ನೆಟ್ ಹಾಗೂ ಸರ್ವರ್ ಸಮಸ್ಯೆಗಳು ಇರುವ ಕಡೆ ಎಲ್ಲವನ್ನೂ ಸರಿಪಡಿಸುವ ಕೆಲಸ ನಡೆದಿದೆ. ಇನ್ನೊಂದು ತಿಂಗಳಲ್ಲಿ ತಾಂತ್ರಿಕವಾಗಿ ಮೇಲ್ದರ್ಜೆಗೇರಿಸುವ ಕಾರ್ಯಗಳು ನಡೆಯಲಿದ್ದು, ಇದೆಲ್ಲ ಆದರೆ ಇ-ಸ್ವತ್ತು ವಿತರಣೆ ಮತ್ತು ೧೧ ಬಿ ಖಾತೆ ವಿತರಣೆಯ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಅವರು ತಿಳಿಸಿದರು.


ದಿಶಾಂಕ್ ಆಪ್ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇ-ಸ್ವತ್ತು ಸುಧಾರಣೆ ಸಂಬಂಧವೂ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಕಾನೂನು ರೂಪಿಸಿ ಅದು ಜಾರಿಯಾದ ನಂತರ ಪಂಚಾಯ್ತಿ ಮಟ್ಟದಲ್ಲಿರುವ ಇ-ಸ್ವತ್ತು, ೧೧ ಬಿ ಖಾತಾ ವಿತರಣೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಅವರು ಹೇಳಿದರು.


ಪ್ರಗತಿಪಥ: ೨ ತಿಂಗಳಲ್ಲಿ ಆರಂಭ
ಗ್ರಾಮೀಣ ರಸ್ತೆ ಸುಧಾರಣೆಯ ಪ್ರಗತಿ ಪಥ ಯೋಜನೆ ಇನ್ನು ೨ ತಿಂಗಳಲ್ಲಿ ಆರಂಭವಾಗಲಿದೆ. ಈ ವರ್ಷವೇ ಈ ಯೋಜನೆಯನ್ನು ಆರಂಭಿಸುತ್ತೇವೆ ಎಂದು ಜೆಡಿಎಸ್‌ನ ರವಿಕುಮಾರ್ ರವರ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ಹೇಳಿದರು.