ನ.8ರಂದು ಕನಕ ಜಯಂತಿ ಸಾಧಕರಿಗೆ ಸನ್ಮಾನ

ಚಿತ್ರದುರ್ಗ, ನ.02:- ಇದೇ ನವೆಂಬರ್ 08 ರಂದು ಸಂತ ಶ್ರೇಷ್ಟ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಇತರೆ ಸಮಾಜದಲ್ಲಿ ಸೇವೆ ಮಾಡಿದಂತಹ ಸಾಧಕರಿಗೆ ಕನಕ ಸೇವಾರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.08 ರಂದು ವೇದಿಕೆ ಕಾರ್ಯಕ್ರಮ ಕನಕ ವೃತ್ತದಲ್ಲಿ ಬೆಳಗ್ಗೆ 10.30 ಕ್ಕೆ ನಡೆಯಲಿದ್ದು, ಕಾರ್ಯಕ್ರಮ ನಂತರ ಮಧ್ಯಾಹ್ನ 12 ಗಂಟೆಗೆ ವಿವಿಧ ಕಲಾ ತಂಡಗಳೊಂದಿಗೆ ಜಿಲ್ಲಾ ಕುರುಬ ಸಂಘದ ಕಚೇರಿವರೆಗೂ ಮೆರವಣಿಗೆ ನಡೆಸಲಾಗುವುದು ಎಂದರು.


ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿರುವ ಕನಕದಾಸರ ಆಶಯದಂತೆ ಇತರೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಾದ ಕಾಶಿವಿಶ್ವನಾಥ್ ಶ್ರೇಷ್ಟಿ, ಬಿ.ಎಸ್.ಸುರೇಶ್ ಬಾಬು, ಕೆ.ಟಿ.ಶಿವಕುಮಾರ್, ಈ.ಅಶೋಕ್ ಹಾಗೂ ಎನ್ ಆಶೋಕ್ ಅವರುಗಳಿಗೆ ಕನಕ ಸೇವಾರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಅದರಂತೆಯೇ ಕುರುಬ ಸಮಾಜದಲ್ಲಿದ್ದು, ವಿವಿಧ ಸೇವೆಗಳನ್ನು ಮಾಡುತ್ತಿರುವ ಸಾಧಕರಾದ ಮಾಲತೇಶ್ ಮುದ್ದಜ್ಜಿ, ಡಾ.ಚಂದ್ರಕಾಂತ್ ನಾಗಸಮುದ್ರ, ಡಾ.ಲೀಲಾರಾಘವನ್, ಶಿವರಾಜ್, ಎಂ.ಎನ್.ಲಕ್ಷ್ಮೀಕಾಂತ್, ಪರಶುರಾಮ್ ಟಿ., ಸುದರ್ಶನ್, ಮುರುಳಿ, ಭಜನೆ ನಿಂಗಪ್ಪ ಹಾಗೂ ಗಂಗಮ್ಮ ತಾಳಿಕಟ್ಟೆ ಅವರುಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕನಕ ಗುರುಪೀಠದ ಆಡಳಿತಾಧಿಕಾರಿ ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ ನಾಯಕ ಶ್ರೀ ಕನಕದಾಸರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಶ್ರೀರಾಮ್, ಗೌರವಾಧ್ಯಕ್ಷ ಹೆಚ್.ಮಂಜಪ್ಪ, ತಾಲ್ಲೂಕು ಅಧ್ಯಕ್ಷ ಓಂಕಾರಪ್ಪ, ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್ ಮುದ್ದಜ್ಜಿ, ರಮೇಶ್ ಮಧುರಿ, ಲೋಕೇಶಪ್ಪ, ಎಸ್.ಕೆ. ಮಂಜುನಾಥ್, ಸುರೇಶ್ ಉಸ್ಥಿತರಿದ್ದರು.