
ನವ ವಧೂವರರಿಗೆ ತಾಂಬೂಲ ಶಾಸ್ತ್ರ-ಮಂಗಳ ವಸ್ತು ವಿತರಣೆ
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ನ.೨೯ ಮತ್ತು ೩೦ರಂದು ನಡೆಯುವ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಹಿಂದವಿ ಸಾಮ್ರಾಜ್ಯೋತ್ಸವದ ಸಂದರ್ಭದಲ್ಲಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹಕ್ಕೆ ಪೂರ್ವಭಾವಿಯಾಗಿ ಸೋಮವಾರ ನವ ವಧೂವರರ ತಾಂಬೂಲ ಶಾಸ್ತ್ರ ಮತ್ತು ಮಂಗಳ ವಸ್ತು ವಿತರಣೆ ಕಾರ್ಯಕ್ರಮ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.
ಟ್ರಸ್ಟ್‌ನ ಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರೋಹಿತ ಶ್ರೀವತ್ಸ ಕೆದಿಲಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಉಚಿತ ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಕೊಂಡಿರುವ ಎಲ್ಲ ನೂತನ ವಧೂವರರು ಮತ್ತು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ತಾಂಬೂಲ ಶಾಸ್ತ್ರ ನೆರವೇರಿಸಿ ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳಲಾಯಿತು. ಮದುವೆಗೆ ಬೇಕಾದ ಸೀರೆ, ರವಿಕೆ ಕಣ, ಅಂಗಿ, ಧೋತಿ ಸೇರಿದಂತೆ ಎಲ್ಲ ಬಗೆಯ ಮಂಗಳ ವಸ್ತುಗಳನ್ನು ವಿತರಣೆ ಮಾಡಲಾಯಿತು.
ಉಚಿತ ಸಾಮೂಹಿಕ ವಿವಾಹದಲ್ಲಿ ಒಟ್ಟು ೨೫ ಜೋಡಿ ವಧೂವರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ ೧೪ ಜೋಡಿಯ ತಾಂಬೂಲ ಶಾಸ್ತ್ರ ನಡೆಯಿತು. ಉಳಿದ ಜೋಡಿಗಳ ದಾಖಲೆ ಕ್ರೂಢೀಕರಣ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ಅವರ ತಾಂಬೂಲ ಶಾಸ್ತ್ರ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.
ಸಂಪೂರ್ಣ ಉಚಿತ:
ಈ ವರ್ಷ ನಡೆಯುವ ೩ನೇ ವರ್ಷದ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಸಂದರ್ಭ ಉಚಿತ ಸಾಮೂಹಿಕ ವಿವಾಹ ಮಾಡಿಸಲು ಸಂಕಲ್ಪ ಮಾಡಿದ್ದೆವು. ಆರೆಸ್ಸೆಸ್‌ನ ೧೦೦ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆ ಹಾಕಿಕೊಳ್ಳಲಾಗಿತ್ತು. ಮದುವೆಯ ಎಲ್ಲ ಸಂಪ್ರದಾಯ ವಿಧಿಗಳನ್ನು ಇಲ್ಲಿ ಚಾಚೂ ತಪ್ಪದೆ ಮಾಡಲಾಗುತ್ತದೆ. ಅದರಂತೆ ಇಂದು ತಾಂಬೂಲ ಶಾಸ್ತ್ರ ಮಾಡಲಾಗಿದೆ. ಕರಿಮಣಿ, ಕಾಲುಂಗುರ, ವಧೂ ವರರ ಮದುವೆ ಉಡುಪು ಎಲ್ಲವನ್ನೂ ಉಚಿತವಾಗಿ ನೀಡಿ, ಮದುವೆಯ ಖರ್ಚುಗಳನ್ನೂ ಭರಿಸಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಆಡಂಬರದ ಮದುವೆ, ವಿವಾಹದ ಬಳಿಕ ತಲೆದೋರುವ ಆರ್ಥಿಕ ಸಮಸ್ಯೆಗಳನ್ನು ಯೋಚಿಸಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ಹೇಳಿದ ಅವರು, ಶ್ರೀನಿವಾಸ ಕಲ್ಯಾಣೋತ್ಸವ, ಹಿಂದವಿ ಸಾಮ್ರಾಜ್ಯೋತ್ಸವ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ೨ ದಿನಗಳಲ್ಲಿ ಆಯೋಜನೆಗೊಂಡಿದ್ದು, ಸುಮಾರು ಒಂದೂಕಾಲು ಲಕ್ಷ ಜನ ಬಂದು ಹೋಗುವ ನಿರೀಕ್ಷೆ ಇದೆ. ನಮ್ಮ ಟ್ರಸ್ಟ್‌ನಿಂದ ೬೦೦ ಜನರಿಗೆ ನೆರವು ನೀಡಲಾಗಿದೆ. ೨೬ ಯುವ ಗುಂಪುಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದ್ದು, ೪೭೦೦ ಮಂದಿ ದೇಶದ ನಾನಾ ಕಡೆ ಉದ್ಯೋಗ ಪಡೆದಿದ್ದಾರೆ. ಅರುಣ ಸಾರಥಿ ಸಂಘಟನೆ ಮೂಲಕ ೨.೬೦ ಲಕ್ಷ ಧನಸಹಾಯ ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ವಹಿಸಿದ್ದರು. ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮ್‌ರಾಜ್, ಸಹ ಸಂಚಾಲಕ ಉಮೇಶ್ ಕೋಡಿಬೈಲು, ಮುಖಂಡರಾದ ರೂಪೇಶ್, ಪ್ರೇಮಾ ರಾಧಾಕೃಷ್ಣ ರೈ, ಮಹಿಳಾ ಘಟಕದ ಸಂಚಾಲಕಿ ಪ್ರೇಮಾ ಮುಂಡೂರು ಉಪಸ್ಥಿತರಿದ್ದರು. ತನುಷಾ ಪ್ರಾರ್ಥನೆ ಹಾಡಿದರು. ಶ್ರೀನಿವಾಸ ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ ಸ್ವಾಗತಿಸಿದರು. ರವಿ ಕುಮಾರ್ ರೈ ಕೆದಂಬಾಡಿ ಮಠ ಕಾರ್ಯಕ್ರಮ ನಿರ್ವಹಿಸಿದರು.


























