
ವಾಷಿಂಗ್ಟನ್,ಅ.11:- ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ನಿರೀಕ್ಷೆಯಲ್ಲಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಕೈ ತಪ್ಪಿದ ಬಗ್ಗೆ ಹತಾಶೆಯಿಂದ ಪ್ರತಿಕ್ರಿಯಿಸಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು ಕೂಡ ಅದಕ್ಕೆ ನಿಜವಾಗಿಯೂ ತಾವೇ ಅರ್ಹರು ಎಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಪ್ರಶಸ್ತಿ ವಿಜೇತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಹಲವಾರು ಸಂದರ್ಭಗಳಲ್ಲಿ ಸಹಾಯ ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿ ಇಂದು ನನಗೆ ಕರೆ ಮಾಡಿ, ನೀವು ನಿಜವಾಗಿಯೂ ಇದಕ್ಕೆ ಅರ್ಹರು ಆದ್ದರಿಂದ ನಾನು ಇದನ್ನು ನಿಮ್ಮ ಗೌರವಾರ್ಥವಾಗಿ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನಂತರ ಟ್ರಂಪ್ ತಮಾಷೆಯಾಗಿ ನಾನು ಮಾರಿಯಾಳನ್ನು ಅದನ್ನು ನನಗೆ ಕೊಡುವಂತೆ ಕೇಳಲಿಲ್ಲ. ನಾನು ಅವಳಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇನೆ. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದರಿಂದ ನನಗೆ ಸಂತೋಷವಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯ ಅಧ್ಯಕ್ಷರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಪದೇ ಪದೇ ಹೇಳುತ್ತಿರುವ ಬಗ್ಗೆ ಕೇಳಿದಾಗ, ಅವರು ನೊಬೆಲ್ ಶಾಂತಿ ಪ್ರಶಸ್ತಿಯ ದೀರ್ಘ ಇತಿಹಾಸದಲ್ಲಿ, ಈ ಸಮಿತಿಯು ಎಲ್ಲಾ ರೀತಿಯ ಪ್ರಚಾರಗಳು ಮತ್ತು ಮಾಧ್ಯಮಗಳ ಗಮನವನ್ನು ಕಂಡಿದೆ. ಪ್ರತಿ ವರ್ಷ, ಜನರು ಶಾಂತಿ ಎಂದರೆ ಏನು ಎಂಬುದರ ಕುರಿತು ಬರೆಯುವ ಸಾವಿರಾರು ಪತ್ರಗಳನ್ನು ನಾವು ಸ್ವೀಕರಿಸುತ್ತೇವೆ. ಸಮಿತಿಯು ಚರ್ಚಿಸುವ ಕೋಣೆಯಲ್ಲಿ ಎಲ್ಲಾ ಪ್ರಶಸ್ತಿ ವಿಜೇತರ ಭಾವಚಿತ್ರಗಳಿವೆ – ಧೈರ್ಯ ಮತ್ತು ಸಮಗ್ರತೆಯಿಂದ ಕೆಲಸ ಮಾಡಿದವರು. ನಾವು ನಮ್ಮ ನಿರ್ಧಾರಗಳನ್ನು ಆಲ್ಫ್ರೆಡ್ ನೊಬೆಲ್ ಅವರ ಕೆಲಸ ಮತ್ತು ಆಶಯಗಳ ಆಧಾರದ ಮೇಲೆ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಿದ್ದಕ್ಕಾಗಿ ಮಾರಿಯಾ ಕೊರಿನಾ ಮಚಾದೊ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಚಾದೊ ಪ್ರಶಸ್ತಿಯ ಭಾಗವಾಗಿ $1.2 ಮಿಲಿಯನ್ ಪಡೆಯಲಿದ್ದಾರೆ. ಮಚಾದೊ ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸಿದರು ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ಶಾಂತಿಯುತ ಪರಿವರ್ತನೆಯನ್ನು ಸಾಧಿಸಿದರು ಎಂದು ನೊಬೆಲ್ ಸಮಿತಿ ಹೇಳಿದೆ.





























