ನೇಪಾಳ: ಜಾಲತಾಣದ ಮೇಲಿನ ನಿಷೇಧ ವಾಪಸ್


ಕಠ್ಮಂಡು, ಸೆಪ್ಟೆಂಬರ್ ೯: ಸೋಮವಾರ ಯುವಕರ ಹಿಂಸಾತ್ಮಕ ಪ್ರತಿಭಟನೆಗಳು ದೇಶವನ್ನು ಬೆಚ್ಚಿಬೀಳಿಸಿದ ನಂತರ ಎಚ್ಚೆತ್ತ ನೇಪಾಳ ಸರ್ಕಾರವು ಸಾಮಾಜಿಕ ಮಾಧ್ಯಮದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದೆ.
ಪ್ರತಿಭಟನೆ ವೇಳೆ ಪೊಲೀಸರ ಬಲಪ್ರಯೋಗದಿಂದಾಗಿ ಕನಿಷ್ಠ ೧೯ ಮಂದಿ ಮೃತಪಟ್ಟಿದ್ದು ೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಗೃಹ ಸಚಿವ ರಮೇಶ್ ಲೇಖಕ್ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರತಿಪಕ್ಷ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಕೇಂದ್ರ ಸಮಿತಿ ಸದಸ್ಯೆ ಸ್ವಾತಿ ಥಾಪಾ, “ಎಲ್ಲಾ ೨೬ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಪುನಃಸ್ಥಾಪಿಸಲಾಗಿದೆ. ಆದರೆ ನಿಷೇಧವನ್ನು ತೆರವುಗೊಳಿಸಿದರೆ ಸಾಲದು, ಮುಖ್ಯವಾದುದು ಘಟನೆಗೆ ಉತ್ತರದಾಯಿತ್ವ. ರಾಜ್ಯವು ನಿರಾಯುಧ ಮತ್ತು ಶಾಂತಿಯುತ ಯುವಕರನ್ನು ಕ್ರೂರವಾಗಿ ಹತ್ಯೆ ಮಾಡಿದೆ. ಮೃತರಲ್ಲಿ ಕೆಲವರು ಶಾಲಾ ಸಮವಸ್ತ್ರದಲ್ಲಿದ್ದರು. ಗೃಹ ಸಚಿವರು ರಾಜೀನಾಮೆ ನೀಡಿದ್ದರೂ ಅದು ವಿಷಯವನ್ನು ಬಗೆಹರಿಸುವುದಿಲ್ಲ. ಅಮಾಯಕರ ಈ ಸಾಮೂಹಿಕ ಹತ್ಯೆಗೆ ಸರ್ಕಾರ ನ್ಯಾಯಾಲಯದಲ್ಲಿ ಶಿಕ್ಷೆ ಎದುರಿಸಬೇಕು. ನಾವು ಇಷ್ಟಕ್ಕೆ ಮೌನವಾಗುವದಿಲ್ಲ. ಈ ದೌರ್ಜನ್ಯಗಳನ್ನು ಪ್ರತಿಭಟಿಸಲು ಜೆನ್ ಝೀ ಮಂಗಳವಾರ ಬೀದಿಗಿಳಿಯುತ್ತದೆ ಮತ್ತು ಆರ್ ಪಿಪಿ ಅವರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ಹದಗೆಟ್ಟ ನಂತರ ರಾಜಧಾನಿಯಲ್ಲಿ ಸೇನೆಯನ್ನು ನಿಯೋಜಿಸಲಾಗಿತ್ತು. ಸಂಸತ್ ಸಂಕೀರ್ಣದ ಸುತ್ತಮುತ್ತಲಿನ ರಸ್ತೆಗಳ ಮೇಲೆ ಸೇನಾ ಸಿಬ್ಬಂದಿ ನಿಯಂತ್ರಣ ಸಾಧಿಸಿದ್ದಾರೆ. ಇದಕ್ಕೂ ಮುನ್ನ, ಜೆನ್ ಝೀ ಬ್ಯಾನರ್ ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಯುವಕರು ಕಠ್ಮಂಡುವಿನ ಹೃದಯಭಾಗದಲ್ಲಿ ಸಂಸತ್ತಿನ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು ಮತ್ತು ನಿಷೇಧವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿದರು.
ನೇಪಾಳದ ಇತರ ಭಾಗಗಳಲ್ಲಿಯೂ ಭುಗಿಲೆದ್ದ ಈ ಪ್ರತಿಭಟನೆಗಳು ದೇಶದ ಇತ್ತೀಚಿನ ಇತಿಹಾಸದಲ್ಲಿ ಒಂದೇ ದಿನದಲ್ಲಿ ದೊಡ್ಡದಾಗಿ ಮಾರ್ಪಟ್ಟಿತು. ಭದ್ರತಾ ಪಡೆಗಳ ಹಿಂಸಾತ್ಮಕ ಪ್ರತಿಕ್ರಿಯೆಯು ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರ ಸರ್ಕಾರದ ಮೇಲೆ ಒತ್ತಡವನ್ನು ಹೆಚ್ಚಿಸಿತು. ವಿರೋಧ ಪಕ್ಷಗಳು ಮತ್ತು ಆಡಳಿತ ಒಕ್ಕೂಟದ ಕೆಲವು ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಕೆಲವು ಪ್ರತಿಭಟನಾಕಾರರು ಸಂಸತ್ತಿನ ಸಂಕೀರ್ಣಕ್ಕೆ ಪ್ರವೇಶಿಸಿದಾಗ ಪ್ರತಿಭಟನೆ ಹಿಂಸಾತ್ಮಕ ರೂಪ ತೆಳೆಯಿತು. ಜನಸಮೂಹವನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಮತ್ತು ಲೈವ್ ರೌಂಡ್ ಗಳನ್ನು ಬಳಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮತ್ತೊಂದು ವಿರೋಧ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಜಂಟಿ ವಕ್ತಾರ ಪ್ರತಿಭಾ ರಾವಲ್ ಮಾತನಾಡಿ, ನಿರ್ಬಂಧಗಳನ್ನು ಭಾಗಶಃ ಹಿಂತೆಗೆದುಕೊಂಡಿದ್ದರೂ ಮಂಗಳವಾರದ ಜೆನ್ ಝೀ ಪ್ರತಿಭಟನೆಗಳು ಯೋಜಿಸಿದಂತೆ ಮುಂದುವರಿಯುತ್ತವೆ ಎಂದು ಹೇಳಿದ್ದಾರೆ.
“ಇದು ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಕ್ರಿಯೆಯಲ್ಲ – ಇದು ಹತ್ಯಾಕಾಂಡ. ಇವರು ಶಸ್ತ್ರಧಾರಿಗಳಲ್ಲ, ಫಲಕಗಳನ್ನು ಹಿಡಿದಿದ್ದ ಯುವಕರು. ಅವರ ಧ್ವನಿ ಗುಂಡುಗಳಿಂದ ಎದುರಿಸಲ್ಪಟ್ಟಿತು. ಇದಕ್ಕೆ ರಾಜೀನಾಮೆ ನ್ಯಾಯವಲ್ಲ. ಈ ನಿರ್ಧಾರದಿಂದ ಈ ಪೀಳಿಗೆಯನ್ನು ಮೌನಗೊಳಿಸಲಾಗುದು, ನಾವು ಬೀದಿಗಿಳಿಯುತ್ತೇವೆ. ನಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಮಾತ್ರವಲ್ಲದೆ ರಾಜ್ಯ ಹಿಂಸಾಚಾರಕ್ಕೆ ಹೊಣೆಹೊರುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ,” ಎಂದು ಹೇಳಿದರು.
ಉನ್ನತ ಮಟ್ಟದ ಭ್ರಷ್ಟಾಚಾರ ಪ್ರಕರಣಗಳ ಪರಿಣಾಮಕಾರಿ ವಿಚಾರಣೆಯ ಕೊರತೆ ಮತ್ತು ಆರ್ಥಿಕ ಅಸಮಾನತೆಯ ಬಗ್ಗೆ ನೇಪಾಳದಲ್ಲಿ ಇತ್ತೀಚೆಗೆ ಆಕ್ರೋಶ ಹೆಚ್ಚುತ್ತಿದೆ. ಫೇಸ್ ಬುಕ್, ವಾಟ್ಸಾಪ್, ಇನ್ ಸ್ಟಾಗ್ರಾಮ್ ಮತ್ತು ವಿಚಾಟ್ ಸೇರಿದಂತೆ ಡಜನ್ ಗಟ್ಟಲೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳ ಮೇಲಿನ ನಿಷೇಧದಿಂದ ಪ್ರತಿಭಟನಾಕಾರರು ಕುಪಿತಗೊಂಡು ಬೀದಿಗಿಳಿದಿದ್ದಾರೆ.
ಹಿಂಸಾಚಾರದ ನಂತರ ನೇಪಾಳ ಸರ್ಕಾರ ರಾಜಧಾನಿಯ ಕೆಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಿದೆ. ಕಠ್ಮಂಡು ಮಾತ್ರವಲ್ಲದೆ, ಲಲಿತ್ ಪುರ ಜಿಲ್ಲೆ, ಸನ್ಸರಾಯ್ ಜಿಲ್ಲೆಯ ಪೋಖರಾ, ಬುಟ್ವಾಲ್ ಮತ್ತು ಇಟಾಹರಿಯಲ್ಲಿ ಕರ್ಫ್ಯೂ ಹೇರಲಾಗಿದೆ.
ತಮ್ಮ ಸರ್ಕಾರ ಯಾವಾಗಲೂ ವೈಪರೀತ್ಯಗಳನ್ನು ವಿರೋಧಿಸುತ್ತದೆ ಮತ್ತು ರಾಷ್ಟ್ರವನ್ನು ದುರ್ಬಲಗೊಳಿಸುವ ಯಾವುದೇ ಕೃತ್ಯವನ್ನು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಒಲಿ ಭಾನುವಾರ ಹೇಳಿದ್ದಾರೆ.
ಇದೇ ವೇಳೆ, ಪಕ್ಷವು ಸಾಮಾಜಿಕ ಮಾಧ್ಯಮಕ್ಕೆ ವಿರುದ್ಧವಾಗಿಲ್ಲ, “ಆದರೆ ನೇಪಾಳದಲ್ಲಿ ವ್ಯಾಪಾರ ಮಾಡುವವರು, ಹಣ ಸಂಪಾದಿಸುವವರು ಮತ್ತು ಇನ್ನೂ ಕಾನೂನನ್ನು ಅನುಸರಿಸದವರನ್ನು ಒಪ್ಪಿಕೊಳ್ಳಲಾಗದು” ಎಂದು ಪ್ರಧಾನಿ ಹೇಳಿದ್ದಾರೆ.