Home Uncategorized ನೇತ್ರಕಲಾ ಸಂಘದ 15 ವಾರ್ಷಿಕೋತ್ಸವ : ಶವ ಆಗುವುದರೊಳಗಾಗಿ ಶಿವನನ್ನು ಕಾಣಬೇಕು

ನೇತ್ರಕಲಾ ಸಂಘದ 15 ವಾರ್ಷಿಕೋತ್ಸವ : ಶವ ಆಗುವುದರೊಳಗಾಗಿ ಶಿವನನ್ನು ಕಾಣಬೇಕು

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.09: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಿನ್ನೆ ಸಿರುಗುಪ್ದ ನೇತ್ರ ಕಲಾ ಸಂಘದ 15ನೇ ವಾರ್ಷಿಕೋತ್ಸವ ಮತ್ತು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವ ಉದ್ಯಮಿ ಎಂ. ಚಂದ್ರಶೇಖರಗೌಡ , ನೃತ್ಯ, ನಾಟಕ,ಮತ್ತು ಸಂಗೀತ ಮನುಷ್ಯನ ಭಾವನೆಗಳಿಗೆ ಜೀವ ತುಂಬುವ ಶಕ್ತಿ, ಕಲಿಯುವ ವಿದ್ಯಾರ್ಥಿಗಳಿಗೆ ಆಲೋಚಿಸುವಂತೆ ಮಾಡಿ ಅವರ ಸಾಧನೆಗೆ ದಾರಿ ತೋರುವ ಶಕ್ತಿ, ಈ ನೆಲದ ಕಲೆ ಸಂಸ್ಕೃತಿಯಲ್ಲಿ ಮಾತ್ರ ಇರುವುದು ವಿಶೇಷ. ಆಮೇಲೆ ಮನುಷ್ಯ ಶವ ಆಗುವುದರೊಳಗಾಗಿ ಶಿವನನ್ನು ಕಾಣಬೇಕು ಆಗ ಮಾತ್ರ ಮನುಷ್ಯನ ಬದುಕಿಗೆ ಸಾರ್ಥಕ ಆಗುತ್ತದೆ ಇಂತಹ ಕೆಲಸ ಇವತ್ತು ನೇತ್ರಕಲಾ ಸಂಘ ಮಾಡುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕಲಾವಿದರನ್ನು ಸನ್ಮಾನಿಸಿದರೆ ಕಲೆಯನ್ನೆ ಗೌರವಿಸಿದಂತೆ ವೇದಿಕೆಯು ಪ್ರತಿಯೊಬ್ಬ ಕಲಾವಿದರಿಗೂ ಬದುಕುವ ಶಕ್ತಿ ನೀಡುತ್ತದೆ ಇಂತಹ ಕಲಾವಿದರನ್ನು ಗೌರವಿಸುವುದು ಸಂಘ ಸಂಸ್ಥೆಗಳ ಕೆಲಸ ಮಾಡಬೇಕೆಂದರು.

ಅಧ್ಯಕ್ಷತೆವಹಿಸಿದ ಮೇಯರ್ ಪಿ. ಗಾದೆಪ್ಪ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಶಕ್ತಿ ಕಲಾವಿದರಿಗೆ ಇದೆ ವ್ಯಕ್ತಿಯ ಜೀವನವನ್ನು ರೂಪಿಸಲು ಕಲೆ ಮುಖ್ಯ ಕಾರಣವಾಗುತ್ತದೆ ಉದಾಹರಣೆಗೆ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ದೇವಸ್ಥಾನದ ಅರ್ಚಕನಾಗಿ ಒಂದು ಯುವಕ ಸಂಘವನ್ನು ಕಟ್ಟಿ ಅದರ ಮೂಲಕ ಸಾಮಾಜಿಕ ಸೇವೆಯನ್ನು ಮಾಡಿ ಇಂದು ಈ ಒಂದು ಸ್ಥಾನವನ್ನು ಅಲಂಕರಿಸಿದ್ದೇನೆ ಕಾರಣ ಈ ಒಂದು ಸಾಮಾಜಿಕ ಸೇವೆ ಮತ್ತು ಕಲೆ ಅಂತ ಶಕ್ತಿ ಕಲೆಗೆ ಮಾತ್ರ ಇದೆಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಚಿಕ್ಕುಂತಿ ಮಹಾಮಠದ ಬಸವಲಿಂಗ ಮಹತ್ವಗಳು ಮತ್ತು ಶಿವಮೂರ್ತಿ ಮಹಾಸ್ವಾಮಿಗಳು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ. ಮಾನಯ್ಯ, ಹಿರಿಯ ಸಾಹಿತಿ ಗಂಗಾಧರ್ ಪತ್ತಾರ, ಕಲಾ ಸಂಘದ ಅಧ್ಯಕ್ಷ ದಳವಾಯಿ ಈರಣ್ಣ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಎಲ್ಲನಗೌಡ ಶಂಕರ ಬಂಡೆ, ರಂಗ ತೋರಣದ ಪ್ರಭುದೇವ್ ಕಪ್ಪಗಲ್, ಕೊರಲಗುಂದಿ ಬಸವನಗೌಡ, ಕಲಾಸಂಘದ ಕಾರ್ಯದರ್ಶಿ ವೀರೇಶ್ ದಳವಾಯಿ ದೊಡ್ಡ ಹುಸೇನಪ್ಪ, ತೊಗಲಗೊಂಬೆ ಕಲಾವಿದ ಸುಬ್ಬಣ್ಣ ಎಚ್ ತಿಪ್ಪೇಸ್ವಾಮಿ ಮುದ್ದಟನೂರು, ಸುಂಕಪ್ಪ ಎರಗುಡಿ ಮೊದಲಾದವರು ಇದ್ದರು.

ಹಿಂದುಸ್ತಾನಿ ಶಾಸ್ತ್ರಿ ಸಂಗೀತ ಪಂಡಿತ್ ವಿರುಪಾಕ್ಷಪ್ಪ ಇಟಿಗಿ ಹಾಗೂ ಸಿ ದುರ್ಗೇಶ್, ವಚನ ಸಂಗೀತ ದಳವಾಯಿ ಅಂಬಣ್ಣ, ರವಿವರ್ಮ ರಾಯಚೂರು ಸುಗಮ ಸಂಗೀತ, ಹನುಮಯ್ಯ ತತ್ವಪದ, ಶೇಖಣ್ಣ ಜಾಲಿಬೆಂಚಿ ಸಮೂಹ ನೃತ್ಯದಲ್ಲಿ ಮೂನ್ ವಾಕರ್ಸ್ ತಂಡದ ಮಕ್ಕಳಿಂದ ಹಾಗೂ ಕೋಟೆ ಶಾಲೆ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ ಹಾಗೂ ಭರತನಾಟ್ಯ ಪ್ರೇಕ್ಷಕರನ್ನು ರಂಜಿಸಿದವು.

ಕಾರ್ಯಕ್ರಮದ ನಿರೂಪಣೆ ಸೌಮ್ಯ ಮತ್ತು ಎರ್ರಿಸ್ವಾಮಿ ನಡೆಸಿಕೊಟ್ಟರು ಹನುಮಯ್ಯ ತಂಡದವರಿಂದ ನಾಡಗೀತೆ ಹಾಗೂ ರೈತ ಗೀತೆ ಹಾಡಲಾಯ್ತು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂಗೀತ ಬೈಲಾಟ ರಂಗಭೂಮಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ವಿಶೇಷವಾಗಿ ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯ್ತು.