
ಈ ವಾರ ತೆರೆಗೆ
ಸ್ನೇಹದೊಳಗಿನ ನೆನಪುಗಳು, ಆ ನೆನಪುಗಳಲ್ಲಿ ಅಡಗಿರುವ ರಹಸ್ಯಗಳು ಹಾಗೂ ಕಾಲಘಟ್ಟದ ಯುವ ಮನಸ್ಸಿನ ಒಳಹೊರಗಿನ ಹೋರಾಟಗಳನ್ನು ವಿಭಿನ್ನ ಕಥೆಗಳ ಮೂಲಕ ಅನಾವರಣಗೊಳಿಸುವ ಚಿತ್ರ ‘ನೆನಪುಗಳ ಮಾತು ಮಧುರ’ ಈ ವಾರ ಫೆಬ್ರವರಿ 6ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. RED & WHITE ಸೆವೆನ್ ರಾಜ್ ನಿರ್ಮಾಣದಲ್ಲಿ, ಅಫ್ಜಲ್ ನಿರ್ದೇಶನದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಆಶಯ ಹೊಂದಿದೆ.
RED & WHITE ಸೆವೆನ್ ರಾಜ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ನೆನಪುಗಳ ಮಾತು ಮಧುರ’ ಚಿತ್ರವು ಅಂಥಾಲಜಿ (Anthology) ಶೈಲಿಯಲ್ಲಿ ನಾಲ್ಕು ಸ್ನೇಹಿತರ ಸುತ್ತ ನಡೆಯುವ ನಾಲ್ಕು ವಿಭಿನ್ನ ಕಥೆಗಳ ಗುಚ್ಛವನ್ನು ಒಳಗೊಂಡಿದೆ. ಪ್ರತಿ ಕಥೆಯೂ ತನ್ನದೇ ಆದ ತಿರುವು, ಭಾವನೆ ಹಾಗೂ ಅಚ್ಚರಿಗಳನ್ನು ಹೊತ್ತುಕೊಂಡಿದ್ದು, ಮರ್ಡರ್ ಮಿಸ್ಟ್ರಿ, ಹಾರರ್, ಹಾಸ್ಯ ಮತ್ತು ಇಂದಿನ ಯುವಕರ ಬದುಕಿನಲ್ಲಿ ಕಾಣಿಸಿಕೊಳ್ಳುವ ವೈವಿಧ್ಯಮಯ ಅಂಶಗಳನ್ನು ಒಳಗೊಂಡಿದೆ ಎಂದು ನಿರ್ದೇಶಕ ಅಫ್ಜಲ್ ಹೇಳಿದ್ದಾರೆ.
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಫ್ಜಲ್ (ಸೂಪರ್ ಸ್ಟಾರ್ಸ್) ಅವರೇ ರಚಿಸಿ ನಿರ್ದೇಶನ ಮಾಡಿದ್ದಾರೆ. ಸ್ವಾಮಿ ಮೈಸೂರು ಅವರ ಛಾಯಾಗ್ರಹಣ ಚಿತ್ರಕ್ಕೆ ದೃಶ್ಯ ವೈಭವ ನೀಡಿದ್ದು, ರಾಜು ಎಮ್ಮಿಗನೂರು ಅವರ ಸಂಗೀತ ಚಿತ್ರಕ್ಕೆ ಮನಮುಟ್ಟುವ ಸ್ಪರ್ಶ ನೀಡುತ್ತದೆ. ಕಾರ್ತಿಕ್ ಈಶ್ವರಾಚಾರಿ ಅವರ ಸಂಕಲನ ಹಾಗೂ ದೇವರಾಜ ಕುಷ್ಟಗಿ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಗಟ್ಟಿಯಾದ ತಾಳಮೇಳ ಒದಗಿಸಿದೆ.
ನಿರ್ದೇಶಕ ಅಫ್ಜಲ್ ಅವರೇ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಮತ್ತೊಂದು ಮುಖ್ಯ ಪಾತ್ರದಲ್ಲಿ ನಿರ್ಮಾಪಕ ಸೆವೆನ್ ರಾಜ್ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ವಸಿಷ್ಠ ಬಂಟನೂರು, ರಣವೀರ್, ರಾಜಪ್ರಭು, ವಿನಯ್, ಅಂಜಲಿ, ಸೌಮ್ಯ, ರೇಖಾ ರಮೇಶ್, ಶುಭ ತೀರ್ಥ, ವಾದ್ಯಾ, ಗುಬ್ಬಚ್ಚಿ, ಅರವಿಂದ್, ನಾಗೇಂದ್ರ ಅರಸ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕೆ ಶಕ್ತಿ ತುಂಬಿದೆ.
ವಿಭಿನ್ನ ಶೈಲಿಯ ಕಥೆಗಳ ಮೂಲಕ ಸ್ನೇಹ, ನೆನಪು ಮತ್ತು ಜೀವನದ ನಿಜಾಂಶಗಳನ್ನು ತೆರೆ ಮೇಲೆ ಕಟ್ಟಿಕೊಡುವ ಪ್ರಯತ್ನವೇ ‘ನೆನಪುಗಳ ಮಾತು ಮಧುರ’. ಈ ವಾರ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಈ ಚಿತ್ರ ಯಾವ ಮಟ್ಟಿಗೆ ಮಧುರ ಅನುಭವ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.






















