
ಸಂಜೆವಾಣಿ ನ್ಯೂಸ್
ಮೈಸೂರು: ಮೇ.31:- ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ, ನೂತನ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸಿದೆ.
‘ಸಿದ್ದರಾಮಯ್ಯ ಅವರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ. ಜನರ ಕಲ್ಯಾಣಕ್ಕಾಗಿ, ಸಮಾಜದ ಪರಿವರ್ತನೆಗೆ ರಾಜಕಾರಣ ಬಳಸಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಹಿಂದ ಸಮುದಾಯದ ಆತಂಕ ನಿವಾರಣೆ ಮಾಡಲು, ಅಹಿಂದ ಸಮುದಾಯದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಬೇಕು’ ಎಂದು ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ, ಅಹಿಂದ ಸಮುದಾಯಗಳಿಗೆ ದೊಡ್ಡ ಆಘಾತ ಆಗಿದೆ. ಅಹಿಂದ ಸಮುದಾಯಕ್ಕೆ ಪ್ರಾಮುಖ್ಯತೆ ಸಿಗುತ್ತದೆ ಎಂದು ಶೇ.80 ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದರು. ಸಿದ್ದರಾಮಯ್ಯ ಅವರ ರಾಜೀನಾಮೆ ನೋವುಂಟು ಮಾಡಿದೆ ಎಂದರು.
ಸಾಮಾಜಿಕ ಶೈಕ್ಷಣಿಕ ವರದಿಯನ್ನು ಸಿದ್ದರಾಮಯ್ಯ ಅವರು ಸ್ವೀಕರಿಸಿದ್ದಾರೆ, ಮುಂದೆ ಬರುವ ನಾಯಕರು ಜಾತಿಗಣತಿಯನ್ನು ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆ ಪರಿಣಾಮ ಎದುರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯನವರ ಸರಕಾರದಲ್ಲಿ ಜಾತಿವಾದ, ಕೋಮುವಾದ, ಭ್ರಷ್ಟಾಚಾರಕ್ಕೆ, ಸ್ವಜನಪಕ್ಷಪಾತಕ್ಕೆ ಅವಕಾಶ ಇರಲಿಲ್ಲ. ಮುಂದೆ ಬರುವ ನಾಯಕರು ಇದನ್ನು ಮುಂದುವರೆಸಿಕೊಂಡು ಹೋಗಬೇಕು. ಸಿದ್ದರಾಮಯ್ಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರು ಎಲ್ಲರನ್ನು ಒಪ್ಪುವ ನಾಯಕ. ಪಕ್ಷದ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರ ನಂತರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯಲು ಉಪ ಮುಖ್ಯಮಂತ್ರಿ ಮಾಡಬೇಕು. ಹಳೇ ಮೈಸೂರು ಭಾಗದಲ್ಲಿ ಸೂಕ್ತ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ಗೆ ಒತ್ತಾಯಿಸಿದರು.
ಸಿದ್ದರಾಮಯ್ಯನವರು ಶೇ.80 ಶಾಸಕರ ಬೆಂಬಲವನ್ನು ಇದ್ದರೂ, ಸಹ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ ರಾಜೀನಾಮೆ ನೀಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಗೌರವಯುತವಾಗಿ ಹೊರಗೆ ಬಂದಿದ್ದಾರೆ, ಅವರನ್ನು ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಕೋಮುವಾದದ ವಿರುದ್ಧವಾಗಿ ಎದೆತಟ್ಟಿ ಹೇಳಿಕೆಯನ್ನು ನೀಡುತ್ತಿದ್ದರು. ಕೋಮು ದ್ವೇಷದ ವಿರುದ್ಧವಾಗಿ ಬಹಳ ಗಟ್ಟಿಯಾಗಿ ಮಾತನಾಡುತ್ತಿದ್ದರು. ಇಂತಹ ನಾಯಕರಿಗೆ ಇನ್ನೂ ಎರಡು ವರ್ಷಗಳ ಕಾಲ ಅವಕಾಶ ಕೊಡಬೇಕಿತ್ತು ಎಂದರು.
ಸಭೆಯಲ್ಲಿ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ಉಪ್ಪಾರ್, ಕುಂಬಾರ ಸಂಘದ ಅಧ್ಯಕ್ಷ ಹೆಚ್.ಎಸ್. ಪ್ರಕಾಶ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ರವಿನಂದನ್, ಶಿವಣ್ಣ, ಛಾಯಾದೇವಿ, ಕೆಂಡಗಣ್ಣ , ಮಹಾದೇವು, ನಾಗರಾಜ್, ಚನ್ನಪ್ಪ, ಸಂತೋಷ, ಮಂಜುಶೆಟ್ಟಿ, ಹೇಮಂತ್, ಮಹೇಂದ್ರ, ಲೋಕೇಶ್ ಮಾದಾಪುರ, ರೇವಣ್ಣ, ಪ್ರಭು, ಶೇರ್ಖ, ಮದನ್, ರಮೇಶ್ ಮತ್ತಿತರರು ಇದ್ದರು.



























