ನೂತನ ವೃತ್ತಿಪರ ನಿರ್ದೇಶಕಿಯಾಗಿ ಆಯ್ಕೆಯಾದ ಅಶ್ವಿನಿ ಸ್ಪಿನ್‍ಕೃಷ್ಣ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ನ.18:
ಸೇವಾ ಮನೋ ಭಾವನೆಯಿಂದ ಕೆಲಸ ಮಾಡಿದರೆ ನಾವು ಸಹಕಾರ ಸಂಘಗಳನ್ನು ಉಳಿಸಿ ಬೆಳಸಬಹುದು ಎಂದು ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್‍ನ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್ ಸಲಹೆ ನೀಡಿದರು.


ಪಟ್ಟಣದ ಗ್ರಾಮೀಣ ನಿಧಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಕಚೇರಿಯಲ್ಲಿ ಸಂಸ್ಥೆಯ ನೂತನ ವೃತ್ತಿಪರ ನಿರ್ದೇಶಕಿಯಾಗಿ ಆಯ್ಕೆಯಾದ ಅಶ್ವಿನಿ ಸ್ಪಿನ್‍ಕೃಷ್ಣ ಅವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಮಾತನಾಡಿದ ಅವರು ಸಹಕಾರ ಸಂಘಗಳಲ್ಲಿ ಕೆಲಸ ಮಾಡುವವರು ಸೇವಾ ದೃಷ್ಟಿಯನ್ನು ಇಟ್ಟುಕೊಂಡು ಸೇವೆ ಸಲ್ಲಿಸಬೇಕು. ಈ ಸಹಕಾರ ಸಂಘಗಳಲ್ಲಿ ನಾವು ಲಾಭಗಳನ್ನು ಗಳಿಸುವ ಮನೋಭಾವನೆಯನ್ನು ಬಿಡಬೇಕು ಆಗ ಮಾತ್ರ ಸಹಕಾರ ಸಂಸ್ಥೆಗಳು ಬೆಳೆಯಲು ಸಹಕಾರಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.


ಸಹಕಾರ ಸಂಸ್ಥೆಯಲ್ಲಿನ ಕಾರ್ಯ ಚಟುವಟಿಕೆಗಳು ಹಾಗೂ ವ್ಯವಹಾರಗಳನ್ನು ಆಡಳಿತ ಮಂಡಳಿಯ ಎಲ್ಲಾ ಸದಸ್ಯರುಗಳು ಅರಿಯಬೇಕು ಜೊತೆಗೆ ಸಂಸ್ಥೆಯ ಏಳಿಗೆಗೆ ಸದಾ ಶ್ರಮಿಸಬೇಕು. ಆ ಮೂಲಕ ಜನ ಸಾಮಾನ್ಯರ ವಿಶ್ವಾಸವನ್ನು ಸಂಸ್ಥೆಯು ಗಳಿಸುವಂತೆ ಮಾಡಬೇಕೆಂದರು. ನಮ್ಮ ಸಂಸ್ಥೆಯಲ್ಲಿ ಆರ್.ಡಿ ಮತ್ತು ಎಫ್.ಡಿಗಳಿಗೆ ಆಕರ್ಷಕ ಬಡ್ಡಿ ದರವನ್ನು ನೀಡುತ್ತಿದ್ದು ಇದರ ಪ್ರಯೋಜನವನ್ನು ತಮ್ಮ ತಮ್ಮ ಷೇರುದಾರರಿಗೆ ಮಾಹಿತಿ ನೀಡಬೇಕೆಂದು ನಿರ್ದೇಶಕರಿಗೆ ತಿಳಿಸಿದರು.


ಇದೇ ಸಂದರ್ಭದಲ್ಲಿ ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ನ ವತಿಯಿಂದ ವೃಕ್ಷ ಮಾತೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹಾಗೂ ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕನವರಿಗೆ ಮೌನ ಆಚರಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ನರಸಿಂಹ ಎಂ.ಎಸ್, ಶಶಿಕುಮಾರ್, ನೇತ್ರಾವತಿ ಸುರೇಶ್, ವಕೀಲರಾದ ಸ್ಪಿನ್‍ಕೃಷ್ಣ, ಸುರೇಶ್,ಸಿಇಒ ಸಿಂಧೂ ಮಂಜುನಾಥ್, ಸಿಬ್ಬಂದಿ ಮಮತಾ, ಪ್ರತಿಜ್ಞಾ, ಮಯೂರ್ ಸೇರಿದಂತೆ ಇನ್ನಿತರರು ಹಾಜರಿದ್ದರು.