
ದಾವಣಗೆರೆ,ಜೂ.28- ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು ಎನ್ನುವ ನಿಯಮಗಳು ಇದ್ದರೂ ಕೂಡ ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ನೀರು ಪೂರೈಕೆ ಮಾಡುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತ ಮಾಡುವಂತೆ ಆಗ್ರಹಿಸಿ ಬಿಜೆಪಿಯಿಂದ ಕರೆಯಲಾಗಿದ್ದ ದಾವಣಗೆರೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಿಜೆಪಿಯ ಮುಖಂಡರು ಹಲವು ತಂಡಗಳನ್ನು ರಚಿಸಿ ನಗರದ ವಿವಿಧ ಭಾಗಗಳಿಗೆ ತೆರಳಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು. ಇನ್ನು ಕೆಲವೆಡೆ ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಿದರು. ಬಂದ್ ಆರಂಭದಲ್ಲಿ ನಗರದ ಜಯದೇವ ವೃತ್ತದಲ್ಲಿ ಟೈರಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿಯ ಮುಖಂಡರು, ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರವು ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ ಕೈಗೊಂಡಿದೆ. ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟಿನ ಪ್ರದೇಶದ ಜನಪ್ರತಿನಿಧಿಗಳು, ರೈತರ ಸಭೆ ನಡೆಸದೇ ಕಾಮಗಾರಿ ನಡೆಸಲು ಮುಂದಾಗಿದೆ. ಇದು ರೈತರ ಕತ್ತು ಹಿಸುಕುವ ಅಮಾನವೀಯ ಕೃತ್ಯ ಎಂದು ಕಿಡಿಕಾರಿದರು.
ಈ ಕಾಮಗಾರಿ ಕೈಗೊಂಡಿರುವ ಪ್ರದೇಶವು ಆತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಘಟಕಕ್ಕೆ ನೀರು ಸರಬರಾಜು ಮಾಡಲು ಮಾಡುತ್ತಿರುವ ಕಾಮಗಾರಿಯೂ ಅವೈಜ್ಞಾನಿಕವಾಗಿದೆ. ಇದು ತಾಯಿಯ ಎದೆ ಸೀಳಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಮಗಾರಿಯಿಂದ ಬಲದಂಡೆ ನಾಲೆಯ ನೀರಿನ ವೇಗವು ಜಲಾಶಯದ ಬುಡದಲ್ಲಿಯೇ ಕ್ಷೀಣಿಸುತ್ತದೆ, ಇದರಿಂದ ನಾಲೆಯಲ್ಲಿ ಹರಿಯುವ ನೀರಿನ ಬೇಗದ ಪ್ರಮಾಣ ಕಡಿಮೆಯಾಗಿ, ನಾಲೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುವುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಅಚ್ಚುಕಟ್ಟುದಾರರು ನೀರಿನ ಕೊರತೆ ಜತೆ ಬೆಳೆಗಳ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
1600 ಕೋಟಿ ವೆಚ್ಚದ ಕಾಮಗಾರಿ ಬಿಜೆಪಿ ಸರ್ಕಾರದಲ್ಲೇ ಅನುಮೋದನೆ ಪಡೆದಿತ್ತು. ಭದ್ರಾ ಡ್ಯಾಂನಲ್ಲಿರುವ ಹಿನ್ನೀರಿನಿಂದ ನೀರನ್ನು ಲಿಫ್ಟ್ ಮೂಲಕ ಇಲ್ಲವೇ ಅಕ್ವಡೇಟರ್‍ಗಳನ್ನು ನಿರ್ಮಿಸಿ ಕೊಂಡೊಯ್ಯಬೇಕೆಂದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಯೋಜನೆಯ ಮೂಲ ಉದ್ಧೇಶವನ್ನೇ ಬದಿಗೊತ್ತಿದೆ. ನಾವುಗಳು ನಮ್ಮ ಪ್ರಾಣ ಹೋದರೂ ಇಂತಹ ಕಾಮಗಾರಿಯನ್ನು ನಡೆಸಲು ಬಿಡುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿಯ ಮುಖಂಡರು, ರೈತರು ಇದ್ದರು.