Home ಜಿಲ್ಲೆ ಮೈಸೂರು ನಿವೇಶನ ರದ್ದು ಬಿಜೆಪಿ ಹೋರಾಟಕ್ಕೆ ಸಂದ ಜಯ

ನಿವೇಶನ ರದ್ದು ಬಿಜೆಪಿ ಹೋರಾಟಕ್ಕೆ ಸಂದ ಜಯ

ಸಂಜೆವಾಣಿ ನ್ಯೂಸ್
ಮೈಸೂರು, ಆ.21:-
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ 50-50 ನಿವೇಶನ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರ 1,100 ನಿವೇಶನಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ನಮ್ಮ ಪಕ್ಷದ ಸುಧೀರ್ಘ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ವಕ್ತಾರ ಮೋಹನ್ ತಿಳಿಸಿದರು.


ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1960ರ ದಶಕದಲ್ಲೇ ಜಮೀನು ಕಳೆದುಕೊಂಡು ಪರಿಹಾರ ಪಡೆದಿದ್ದ ಪ್ರಕರಣಗಳಿಗೆ, 2023ರಲ್ಲಿ ಶಾಂತಮ್ಮ ಎಂಬ ಪತ್ರ ವ್ಯವಹಾರದ ಸುಳಿವು ಆಧರಿಸಿ ಮತ್ತೆ 50-50 ಯೋಜನೆಯಡಿ ದುಬಾರಿ ಬೆಲೆಯ ಪರ್ಯಾಯ ನಿವೇಶನ ನೀಡಲಾಗಿತ್ತು. ಅಬ್ದುಲ್ ವಾಜಿದ್, ಸಯ್ಯದ್ ಯೂಸುಫ್, ಮಲ್ಲಪ್ಪ, ವೆಂಕಟಪ್ಪ ಸೇರಿದಂತೆ ನಾನಾ ಹೆಸರುಗಳಲ್ಲಿ ಒಬ್ಬೊಬ್ಬರಿಗೆ 10 ರಿಂದ 120ರವರೆಗೂ ಸೈಟುಗಳನ್ನು ಅಕ್ರಮವಾಗಿ ಪರಾಭಾರೆ ಮಾಡಲಾಗಿದೆ. ಸರ್ಕಾರಿ ದರದ ಪ್ರಕಾರ ಇದು 2,000 ಕೋಟಿ ಮೌಲ್ಯದ್ದಾಗಿದ್ದರೂ, ಮಾರುಕಟ್ಟೆ ಮೌಲ್ಯದ ಪ್ರಕಾರ ಈ ಹಗರಣದ ಮೊತ್ತ 9,000-10,000 ಕೋಟಿ ದಾಟುತ್ತದೆ ಎಂದರು.


ಸಿದ್ದರಾಮಯ್ಯನವರ ಕೆಸರೆ ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ದೇವನೂರು ಬಡಾವಣೆಯ ಬದಲಿಗೆ ವಿಜಯನಗರ ಬಡಾವಣೆಯಲ್ಲಿ ನೀಡಲಾಗಿದ್ದ 14 ಸೈಟುಗಳನ್ನು ದೆಹಲಿ ಮಟ್ಟದ ಕಾನೂನು ಸಲಹೆ ಹಾಗೂ ನಿರಂತರ ಹೋರಾಟದ ಒತ್ತಡಕ್ಕೆ ಮಣಿದು ವಾಪಸ್ ನೀಡಲಾಗಿತ್ತು. ಅಕ್ರಮದ ಸೂತ್ರಧಾರ ಜಿ.ಟಿ.ದಿನೇಶ್ ಕುಮಾರ್ ಮೇಲೆ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಯಿತಾದರೂ, 14 ಸೈಟುಗಳನ್ನು ಹಂಚಿಕೆ ಮಾಡಿದ ಮತ್ತೊಬ್ಬ ಪ್ರಮುಖ ಅಧಿಕಾರಿ ಡಿ.ಬಿ.ನಟೇಶ್ ಅವರಿಗೆ ಬಡ್ತಿ ನೀಡಿ ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.


300 ಸೈಟ್‍ಗಳ ದಾಖಲೆ ಮಿಸ್ಸಿಂಗ್: ನಾವು ಒಟ್ಟು 1,400 ಸೈಟ್‍ಗಳ ಅಕ್ರಮ ಬಹಿರಂಗಪಡಿಸಿದ್ದೆವು. ಆದರೆ, ಸರ್ಕಾರ 1,100 ಸೈಟ್ ರದ್ದು ಮಾಡಿದೆ. ಆದರೆ ಬಾಕಿ 300 ಸೈಟ್‍ಗಳ ದಾಖಲೆಗಳು ಮುಡಾದಲ್ಲಿ ಮಿಸ್ಸಿಂಗ್ ಆಗಿವೆ. ಮಾಜಿ ಸಚಿವರು ಹೆಲಿಕಾಪ್ಟರ್‍ನಲ್ಲಿ ಬಂದು ತಡರಾತ್ರಿ ಕಡತಗಳನ್ನು ಒಯ್ದಿದ್ದು, ಆ 300 ಸೈಟ್‍ಗಳ ದಾಖಲೆಗಳನ್ನು ಶೀಘ್ರವೇ ಬಹಿರಂಗಪಡಿಸಲಾಗುವುದು ಎಂದರು.


ಅಲಾಟ್‍ಮೆಂಟ್ ಬಳಿಕ ಸೇಲ್ ಡೀಡ್ ಮಾಡುವ ಬದಲು 900ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸೆಟಲ್‍ಮೆಂಟ್ ಡೀಡ್ ಮಾಡಲಾಗಿದೆ. ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೇವಲ ಕುಟುಂಬದ ಸದಸ್ಯರ ನಡುವೆ ಮಾತ್ರ ನಡೆಯಬೇಕಿದ್ದ ಸೆಟಲ್‍ಮೆಂಟ್ ಡೀಡ್ ಅನ್ನು ಮುಡಾ ಸೈಟುಗಳಿಗೆ ಬಳಸಿ ಕನ್ಸಿಡರೇಷನ್ ವ್ಯಾಲ್ಯೂ ಜೀರೋ ತೋರಿಸಿ, ಸ್ಟಾಂಪ್ ಡ್ಯೂಟಿ ಹಾಗೂ ಸರ್ಕಾರದ ಕಂದಾಯ ಕಳ್ಳತನ ಮಾಡಲಾಗಿದೆ ಎಂದು ತಿಳಿಸಿದರು.


ಸಿಬಿಐ ತನಿಖೆ ಚುರುಕಾಗಲಿ: 1,100 ಸೈಟ್ ರದ್ದತಿಯ ಆದೇಶ ಕೋರ್ಟ್‍ನಲ್ಲಿ ನಿಲ್ಲಬೇಕಾದರೆ, ಸರ್ಕಾರ ತಕ್ಷಣವೇ ವಿಶೇಷ ವಕೀಲರ ತಂಡವನ್ನು (Sಠಿeಛಿiಚಿಟ ರಚಿಸಿ ಸಿವಿಲ್ ಕೇಸ್ ದಾಖಲಿಸಬೇಕು. 2023ರ ನಂತರದ ಅಕ್ರಮ ಮಾತ್ರವಲ್ಲದೆ, 2019ರಿಂದ 2023ರ ಅವಧಿಯಲ್ಲಿ ನಡೆದ ಸುಮಾರು 4 ರಿಂದ 5 ಸಾವಿರ ಅಕ್ರಮ ನಿವೇಶನಗಳ ಹಂಚಿಕೆಯನ್ನೂ ತನಿಖೆಗೆ ಒಳಪಡಿಸಬೇಕು. ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಲೋಕಾಯುಕ್ತ ಹಾಗೂ ಸಿಬಿಐ ತನಿಖೆ ವೇಗವಾಗಿ ನಡೆಯಬೇಕು ಮತ್ತು ಸಬ್-ರಿಜಿಸ್ಟ್ರಾರ್ ಸೇರಿದಂತೆ ಎಲ್ಲಾ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮಾಧ್ಯಮ ವಕ್ತಾರ ಮಹೇಶ್ ರಾಜೇ ಅರಸ್ ಇದ್ದರು.