Home ಜಿಲ್ಲೆ ಮಂಗಳೂರು ನಿವೇಶನರಹಿತರಿಗೆ ನಿವೇಶನ ಹಂಚಿಕೆ ಪ್ರಗತಿಪರಿಶೀಲನಾಸಭೆ; ವಸತಿ ಯೋಗ್ಯ ನಿವೇಶನ ನೀಡಿ- ಅಧಿಕಾರಿಗಳಿಗೆ ಶಾಸಕ ರೈ ಸೂಚನೆ

ನಿವೇಶನರಹಿತರಿಗೆ ನಿವೇಶನ ಹಂಚಿಕೆ ಪ್ರಗತಿಪರಿಶೀಲನಾಸಭೆ; ವಸತಿ ಯೋಗ್ಯ ನಿವೇಶನ ನೀಡಿ- ಅಧಿಕಾರಿಗಳಿಗೆ ಶಾಸಕ ರೈ ಸೂಚನೆ

ಪುತ್ತೂರು: ಬಡತನದ ಕಾರಣದಿಂದ ನಿವೇಶನವೂ ಇಲ್ಲದೆ ಸಂಕಟ ಪಡುತ್ತಿರುವ ನಿವೇಶನ ರಹಿತರಿಗೆ ವಸತಿಯೋಗ್ಯ ಜಾಗಗಳನ್ನು ನೀಡುವಲ್ಲಿ ಅಧಿಕಾರಿಗಳು ಗಮನ ಹರಿಸಬೇಕು. ಅಲ್ಲಿಗೆ ರಸ್ತೆ,ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನವನ್ನು ಆದ್ಯತೆಯ ನೆಲೆಯಲ್ಲಿ ನೀಡಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಶನಿವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಿವೇಶನ ಹಂಚಿಕೆಗೆ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ೩೧ ಜಿಲ್ಲೆಗಳಲ್ಲಿ ತಲಾ ೫೦ ಸಾವಿರ ನಿವೇಶನ ನೀಡಲು ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ೨ ತಿಂಗಳಲ್ಲಿ ಜಾಗ ಗುರುತಿಸಿ ಲೇಔಟ್ ಅನುಮೋದನೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೈಜ ಫಲಾನುಭವಿಗಳನ್ನು ಗುರುತಿಸಿ ರಾಜೀವಗಾಂಧಿ ವಸತಿ ನಿಗಮ ಪೋರ್ಟೆಲ್ ಗೆ ಅಪ್‌ಲೋಡು ಮಾಡಬೇಕಾಗಿದೆ. ನಿವೇಶನ ಗುರುತಿಸುವಲ್ಲ ಪುತ್ತೂರು ಮೊದಲಸ್ಥಾನಿಯಾಗಿದೆ. ಬೇರೆ ಗ್ರಾಮದಲ್ಲಿಯೂ ನಿವೇಶನ ನೀಡಲು ಸಿಎಂ ಅನುಮತಿ ಪಡೆದುಕೊಳ್ಳಲಾಗಿದೆ. ಪರಿಶಿಷ್ಟಜಾತಿ-ಪಂಗಡದವರು ಲಭ್ಯ ಇಲ್ಲದಿದ್ದಾಗ ಅಂತಹ ನಿವೇಶನ ಇತರರಿಗೆ ನೀಡಲು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಕುಡಿಯುವ ನೀರಿನ ವ್ಯವಸ್ಥೆಗಾಗಿ ೧ ಕೋಟಿ ಅನುದಾನ ಬಂದಿದೆ. ಇದನ್ನು ಪ್ರತೀ ಗ್ರಾಪಂಗಳಿಗೆ ಹಂಚಿಕೆ ಮಾಡಲಾಗುವುದು. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ಅರಣ್ಯದಲ್ಲಿ ಪೈಪ್‌ಲೈನ್ ಕಾಮಗಾರಿ, ಹೆದ್ದಾರಿ ಬದಿಯಲ್ಲಿ ಪೈಪ್‌ಲೈನ್ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಗಮದ ಪೋರ್ಟಲ್ ಗೆ ಅರ್ಜಿ ಸಲ್ಲಿಕೆಯಾಗಿರುವ ಕುರಿತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ವಿವರ ನೀಡಿ, ಪುತ್ತೂರು ತಾಲೂಕಿನ ೨೨ ಗ್ರಾ.ಪಂ.ಗಳಲ್ಲಿ ೧೭೪೪ ಅರ್ಜಿ, ಬಂಟ್ವಾಳ ತಾಲೂಕಿನ ೯ ಗ್ರಾ.ಪಂ.ಗಳ ೯೭೩ ಅರ್ಜಿ, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ೨೫೨ ಅರ್ಜಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ೨೪೬ ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ವಿಟ್ಲಮುಡ್ನೂರಿನಲ್ಲಿ ತಾನೇ ಸುಮಾರು ೮.೫೦ ಎಕರೆ ಜಾಗವನ್ನು ಖರೀದಿ ಮಾಡಿದ್ದು, ಅದರ ಸ್ಥಿತಿ ಯಾವ ಹಂತದಲ್ಲಿದೆ ಎಂದು ಶಾಸಕರು ಮಾಹಿತಿ ಕೇಳಿದರು. ಅದರಲ್ಲಿ ೧೬೬ ನಿವೇಶನಗಳನ್ನು ನೀಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಡಗನ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಕಾದಿರಿಸಿದ ೩.೫೦ ಎಕರೆ ಜಾಗವನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿ ತೋಟ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್, ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ವೇದಿಕೆಯಲ್ಲಿದ್ದರು.