
ಸುಳ್ಯ:ನಮ್ಮ ಸನಾತನ ನಂಬಿಕೆ, ವಿಚಾರ, ಚಿಂತನೆಗಳು ಮೂಲವಾದದ್ದು, ಇದು ಮೂಡ ನಂಬಿಕೆಯಲ್ಲ. ಮೂಲ ನಂಬಿಕೆಗಳು ಹೋಮ, ಯಜ್ಞಗಳಿಗೆ ವೈಜ್ಞಾನಿಕ ಕಾರಣಗಳಿದೆ. ಇದರಿಂದ ಉತ್ತಮ ಮಳೆ, ಬೆಳೆ ಹಾಗೂ ನಾಡು ಸಮೃದ್ಧಿಯಾಗಲಿದೆ ಎಂದು ಅರಸೀಕೆರೆ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮೀಜಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.
ಅವರು ಕರಿಕ್ಕಳದ ಎಣ್ಮೂರು-ಐವತ್ತೊಕ್ಲು ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬುಧವಾರ ನಡೆದ ಸಾಮೂಹಿಕ ಶ್ರೀ ಮಹಾವಿಷ್ಣು ಮಾಹಾಯಾಗದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಮ್ಮ ಮೂಲ ನಂಬಿಕೆಗಳು ನಮ್ಮ ಪರಂಪರೆಯಿಂದ ಬಂದದ್ದು, ಹೋಮ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ ಎಂದ ಅವರು ಐದು ನೂರು ವರ್ಷಗಳ ಹಿಂದೆ ಇಲ್ಲಿಂದ ಹೋಗಿದ್ದ ನಿಮ್ಮ ದೇವರು ಮತ್ತೆ ನಿಮ್ಮ ಊರಿಗೇ ಬಂದಿದ್ದಾರೆ. ನೀವು ಎಲ್ಲರೂ ಭಾಗ್ಯವಂತರು. ಇದು ಪುಣ್ಯದ ಮಣ್ಣು ಎಂದು ಹೇಳಿದರು.
ಮಹಾಯಾಗ ಸಮಿತಿಯ ಪದಾಧಿಕಾರಿಗಳು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.
ಶ್ರೀ ಮಹಾವಿಷ್ಣು ಮಾಹಾಯಾಗ:
ಲೋಕ ಕಲ್ಯಾಣಾರ್ಥವಾಗಿ ಹಾಗೂ ೨೦೨೬ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ, ಅರಸೀಕೆರೆ ಕೋಡಿಮಠ ಮಹಾಸಂಸ್ಥಾನದ ಮಹಾಸ್ವಾಮೀಜಿ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದ ಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರ ವೇದ ಮೂರ್ತಿ ಅಕ್ಷಯ ಭಟ್ ಬರ್ಲಾಯಬೆಟ್ಟು ಅವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ಜರುಗಿತು. ಬೆಳಿಗ್ಗೆ ಶ್ರೀ ಮಹಾವಿಷ್ಣು ಮಹಾಯಾಗ ಪ್ರಾರಂಭಗೊಂಡು ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.



























