
ಸಂಜೆವಾಣಿ ನ್ಯೂಸ್
ಮೈಸೂರು: ಫೆ.15:– ನಗರದ ಮೈಸೂರಿನ ಅಂಚೆ ಕಚೇರಿಯಲ್ಲಿ ಫೆ.1ರಿಂದ 20ರವರೆಗೆ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ-2026 ವನ್ನು ಆಯೋಜಿಸಿದೆ ಎಂದು ಅಂಚೆ ಇಲಾಖೆಯ ಮೈಸೂರು ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಸಂದೇಶ್ ಮಹಾದೇವಪ್ಪ, ಕರ್ನಾಟಕ ಅಂಚೆ ವೃತ್ತವು ಫೆಬ್ರವರಿ 16 ರಿಂದ 20 ಫೆಬ್ರವರಿ 2026ರವರೆಗೆ ಮೈಸೂರಿನ ಅಂಚೆ ತರಬೇತಿ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ 38ನೇ ಎಐಪಿಸಿಎಂ-2026ಯನ್ನು ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭವು ಫೆ.16ರಂದು ಬೆ.10ಗಂಟೆಗೆ ನಡೆಯಲಿದ್ದು, ವಿದ್ವಾನ್ ಮೈಸೂರು ಎಂ.ನಾಗರಾಜ್ ಹಾಗೂ ಅಂತಾರಾಷ್ಟ್ರೀಯ ವಾದಕ ವಿದ್ವಾನ್ ಡಾ.ಮೈಸೂರು ಎಂ.ಮಂಜುನಾಥ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವು ದೇಶದಾದ್ಯಂತ ಅಂಚೆ ನೌಕರರ ನಡುವೆ ಸಾಂಸ್ಕೃತಿಕ ಸ್ಪರ್ಧೆ, ಸ್ನೇಹಭಾವ, ಏಕತೆ ಹಾಗೂ ಒಗ್ಗಟ್ಟಿನ ಮನೋಭಾವನೆ ಬೆಳೆಸುವ ಗುರಿಯನ್ನು ಹೊಂದಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ವಿವಿಧ ರೀತಿಯ ಪ್ರದರ್ಶನಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತಿದ್ದು, ಅಂಚೆ ಇಲಾಖೆಯೊಳಗಿನ ಸೃಜನಶೀಲತೆ, ಪರಂಪರೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ದೇಶದ ವಿವಿಧ ಭಾಗಗಳಿಂದ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ ಒಟ್ಟು 335 ಸಿಬ್ಬಂದಿಗಳು ಮತ್ತು ಅವರ ಮಕ್ಕಳು ಈ ಐದು ದಿನಗಳ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು 21 ರಾಜ್ಯಗಳಿಂದ 32 ವಿಭಾಗೀಯ ಗಾಯನ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೂಚಿಪಲಕುಡಿ, ಸೋಲೊ ಗಾನ, ಕಿರುನಾಟಕ ಕಾರ್ಯಕ್ರಮಗಳು ಜರುಗಲಿದ್ದು, ಪುರುಷ ಮತ್ತು ಮಹಿಳೆಯರು ಪಾಲ್ಗೊಳ್ಳುತ್ತಿದ್ದಾರೆ. ಮಹಾ ನಿರ್ದೇಶಕ ಜಿತೇಂದ್ರ ಗುಪ್ತ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮೊದಲ ಎರಡು ಕಾರ್ಯಕ್ರಮ ನಳ-1ರಲ್ಲಿ ಇರುತ್ತದೆ. ನಂತರದ ಕಾರ್ಯಕ್ರಮ ಪಿಟಿಸಿ ಸಭಾಂಗಣದಲ್ಲಿ ನಡೆಯಲಿದೆ. ಪಂಡಿತ ವೆಂಕಟೇಶ್ ಕುಮಾರ್ ಪಾಲ್ಗೊಂಡು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸುವರು. 1987, 1995 ಮತ್ತು 2008ರಲ್ಲಿ ಮೈಸೂರಿನಲ್ಲಿ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ ನಡೆದಿತ್ತು. ಇದೀಗ 20 ವರ್ಷದ ನಂತರ ಮೈಸೂರಿನಲ್ಲಿ ನಡೆಯುತ್ತಿದೆ. 37ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ(2024-25) ಮಾ.2025ರಲ್ಲಿ ಕೇರಳದ ಕೋಝಿಕ್ಕೋಡ್ ನಲ್ಲಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.






























