ನಾಲ್ವಡಿ ಒಡೆಯರ್ ರಾಜಕಾರಣಿಗಳಿಗೆ ಮೇಲ್ಪಂಕ್ತಿ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.11:-
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಯೋಜನೆಗಳು, ಅಭಿವೃದ್ದಿ ಕಾರ್ಯಗಳು ನಮಗೆ ಆದರ್ಶವಾಗಿದ್ದು, ಇಂದಿನ ರಾಜಕಾರಣಿಗಳು ಅವರನ್ನು ಮೇಲ್ಪಂಕ್ತಿಯಾಗಿ ತೆಗೆದುಕೊಳ್ಳಬೇಕು. ಅವರ ಬಗ್ಗೆ ಧನ್ಯತಾ ಭಾವ ಇರಬೇಕು ಮತ್ತು ಎಲ್ಲ ಕಾಲಕ್ಕೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆಯಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.


ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 2015ರಲ್ಲಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸಲು ಮುಂದಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಮೈಸೂರಿನ ಮಗನಾಗಿ ನಾಲ್ವಡಿ ಅವರನ್ನು ಸ್ಮರಣೆ ಮಾಡುವುದು ನಿಮ್ಮ ಮೊದಲ ಕೆಲಸವಾಗಲಿ ಎಂದು ಒತ್ತಾಯಿಸಿದ್ದೆ. ನಾವು ಧನ್ಯತೆಯಿಂದ ನೆನಪು ಮಾಡಿಕೊಳ್ಳಬೇಕಿರುವುದು ಪ್ರತಿಯೊಂದಕ್ಕೂ ಆಶ್ರಯ, ಅನ್ನದಾತರು, ಪ್ರೇತಕಶಕ್ತಿ, ಇಡೀ ನಾಡಿಗೆ ಆದರ್ಶಪ್ರಾಯವಾಗಿರುವ ನಾಲ್ವಡಿಯವರನ್ನೇ ಹೊರತು ಟಿಪ್ಪುವನ್ನಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದರು.


ಕನ್ನಂಬಾಡಿ ಅಣೆಕಟ್ಟೆ, ಶಿಕ್ಷಣ ಸಂಸ್ಥೆ, ಕೈಗಾರಿಕೆಗಳ ನಿರ್ಮಾಣದ ಮೂಲಕ ರಾಜ್ಯವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದರು. ಜನರಿಗೆ ಅನ್ನದಾತರಾದರು. ಕೆಂಪೇಗೌಡರು ನಿರ್ಮಿಸಿದ ಕರ್ನಾಟಕದ ಕಾಮಧೇನು ಬೆಂಗಳೂರು ಉಸಿರಾಡುತ್ತಿರುವುದು ಕನ್ನಂಬಾಡಿಯ ನೀರಿನಿಂದ. ಅಂಥ ಮಹನೀಯರನ್ನು ನೆನಪಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.


ರಾಜ್ಯದ ಜನರು, ಮೈಸೂರಿನ ಜನರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯಿಂದ ಅನ್ನ ತಿನ್ನುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅನ್ನ ಹಾಗೂ ವಿದ್ಯೆ ನೀಡಿದವರು. ಹೀಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಕನ್ನಂಬಾಡಿ ಕಟ್ಟೆಯಿಂದ ಚಿತ್ರದುರ್ಗದ ತನಕ, ಮೈಸೂರಿನಿಂದ ಭದ್ರಾವತಿ ತನಕ ಇರುವ ಕೈಗಾರಿಕೆಗಳು ಒಡೆಯರ್ ಕೊಡುಗೆ ಎಂದರು.
ಅಲ್ಲದೇ ಕನ್ನಡಪರ ಹೋರಾಟಗಾರ ನಾರಾಯಣ್ ಗೌಡ ಯದುವೀರ್ ಒಡೆಯರ್ ಅವರನ್ನು ಟೀಕಿಸುವ ಭರದಲ್ಲಿ ಮೈಸೂರು ಸಂಸ್ಥಾನವನ್ನು ಎಳೆದು ತಂದಿದ್ದರು. ಆಗ ಮೈಸೂರು ಸಂಸ್ಥಾನವನ್ನು ಎಳೆದು ತರಬೇಡಿ, ರಾಜ್ಯಕ್ಕೆ ಮೈಸೂರು ಸಂಸ್ಥಾನದ ಕೊಡುಗೆ ಅಪಾರವಿದೆ ಎಂದು ನಾರಾಯಣಗೌಡರಿಗೆ ಹೇಳಿದ್ದೆ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಲು ನಾಲ್ವಡಿಯವರ ಕೊಡುಗೆ ಅಪಾರ. ನಾಡುನುಡಿಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡದ ಬಗ್ಗೆ ಮಾತನಾಡುವಾಗ ನಾಲ್ವಡಿಯವರನ್ನು ಧನ್ಯತೆ, ಪೂಜನೀಯ ಭಾವನೆಯಿಂದ ಕಾಣಬೇಕು ಎಂದರು.


ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್, ಅಂತಾರಾಷ್ಟ್ರೀಯ ಹಿರಿಯ ಟೆನ್ನಿಸ್ ಆಟಗಾರ ಬಿ.ಎಸ್.ತುಳಸೀರಾಮ್, ದಸಂಸ ಮುಖಂಡ ಹರಿಹರ ಆನಂದಸ್ವಾಮಿ, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಇದ್ದರು.