
ಸಂಜೆವಾಣಿ ವಾರ್ತೆ
ಮಂಡ್ಯ:ಜು.04:- ಕೆಆರ್‍ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ಒಂದು ಕಟ್ಟು ನೀರು ಬಿಡಲು ಆಗ್ರಹಿಸಿ ರಾಜ್ಯ ರೈತ ಸಂಘದ (ಏಕೀಕರಣ) ಕಾರ್ಯಕರ್ತರು ಹುರುಳಿಕಾಳು ಉಪ್ಸಾರು, ಮುದ್ದೆ ಊಟ ಮಾಡಿ ವಿನೂತನವಾಗಿ ಹೆದ್ದಾರಿ ತಡೆದು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜೆಸಿ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ರಸ್ತೆಯಲ್ಲಿ ಅಡುಗೆ ತಯಾರಿಸಿದರು. ಜಿಲ್ಲೆಯ ಎಲ್ಲ ನಾಲೆಗಳಿಗೆ ನೀರುವ ಬಿಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲೆಯಲ್ಲಿ ರೈತರು ಬೆಳೆ ಬೆಳೆಯದಂತೆ ಕಂಗಾಲಾಗಿ ದ್ದಾರೆ.ಇರುವ ಕಬ್ಬು ಸೇರಿದಂತೆ ತೆಂಗು ಬೆಳೆಯನ್ನು ಉಳಿಸಿ ಕೊಳ್ಳುವುದು ಕಷ್ಟವಾಗಿದೆ. ಏಕೆಂದರೆ ಮಳೆ ಸರಿಯಾದ ಪ್ರಮಾಣದಲ್ಲಿ ಆಗಿಲ್ಲ. ಈಗಾಗಲೇ ಕೆಲವು ಕಡೆ ಜಮೀನು ಒಣಗುತ್ತಿದೆ. ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೆಆರ್‍ಎಸ್ ಅಣೆಕಟ್ಟೆಯಲ್ಲಿನ ನೀರಿನ ಮಟ್ಟ ಇಳಿಮುಖ ವಾಗುತ್ತದೆ. ಜಿಲ್ಲೆಯ ಜನಪ್ರತಿನಿಧಿಗಳು ರೈತರ ಪರವಾಗಿ ಮಾತನಾಡುತ್ತಿಲ್ಲ. ಶಾಸಕರು ತುಟಿ ಬಿಚ್ಚುತ್ತಿಲ್ಲ, ಸರ್ಕಾರದ ಮೇಲೆ ಒತ್ತಡ ತಂದು ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಬರಬೇಕು. ಮಂಡ್ಯ ಜಿಲ್ಲೆಯ ನಾಲೆಗಳಿಗೆ ಒಂದು ಕಟ್ಟು ನೀರು ಹರಿಸುವ ಮೂಲಕ ರೈತರನ್ನು ಉಳಿಸ ಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಶಿವಳ್ಳಿ ಚಂದ್ರಶೇಖರ್ ಮಾತನಾಡಿ, ‘ರೈತರ ಬಗ್ಗೆ ಸರ್ಕಾರಗಳಿಗೆ ಕಾಳಜಿ ಇಲ್ಲ. ಅಣೆಕಟ್ಟೆಯಿಂದ ನೀರು ಹರಿಸದಿದ್ದರೆ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಬೇಕಾ ಗುತ್ತದೆ. ರೈತರು ಒಂದು ಬೆಳೆಯನ್ನು ಬೆಳೆಯದ ಸ್ಥಿತಿಗೆ ಸದ್ಯಕ್ಕೆ ಬಂದು ತಲುಪಿದೆ. ಕಷ್ಟದ ಮೇಲೆ ಕಷ್ಟ ಬರುತ್ತಿರುವ ರೈತರನ್ನು ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಆಗಿದೆ, ಹಾಗಾಗಿ ಕಾವೇರಿ ಜಲಾನಯನ ಪ್ರದೇಶಗಳಿಗೆ ನೀರು ಹರಿಸುವ ಮೂಲಕ ಜನ-ಜಾನುವಾರುಗಳನ್ನು ರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ನಾಗರಾಜು ಗಾಣದಾಳು, ಸುರೇಶ್ ಗೋಪಾಲಪುರ, ಬೂದನೂರು ಪುಟ್ಟಸ್ವಾಮಿ, ಜವರೇಗೌಡ ಕೋಣನಹಳ್ಳಿ, ಕೀಲಾರ ಸೋಮಶೇಖರ್, ನಾಗರಾಜು, ತನು, ನಿಂಗೇಗೌಡ ಭಾಗವಹಿಸಿದ್ದರು.


































