ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಸುಳ್ಯ:ನಾರಾಯಣ ಗುರುಗಳು ಕೆಳವರ್ಗದಲ್ಲಿ ಸಾಮಾಜಿಕ ಸಮಾನತೆ ತಂದವರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ಆರ್ಥಿಕವಾಗಿ ಬದಲಾವಣೆಗೆ ಕಾರಣರಾದವರು. ಇವರ ಸಾಮಾಜಿಕ ಕ್ರಾಂತಿಯೇ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆಯಾಗಿತ್ತು ಎಂದು ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸುಳ್ಯ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸುಳ್ಯ ಇದರ ಆಶ್ರಯದಲ್ಲಿ ಬುಧವಾರ ತಾಲೂಕು ಕಚೇರಿಯಲ್ಲಿ ನಡೆದ ಸಾಮಾಜಿಕ ಸಮಾನತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಾಯಣ ಗುರುಗಳು ಎಲ್ಲಾ ಸಮುದಾಯಕ್ಕೆ ಸೇರುವ ವ್ಯಕ್ತಿ. ಅವರ ಆದರ್ಶಗಳು ಇಂದಿನ ಯುವ ಸಮಾಜಕ್ಕೆ ದಾರಿದೀಪವಾಗಬೇಕು. ಅವರ ಜಯಂತಿ ಕಾರ್ಯಕ್ರಮ ಒಂದು ಸಮುದಾಯಕ್ಕೆ ಮೀಸಲಾಗಿಸದೆ ಇಂತಹ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯದವರು ಭಾಗವಹಿಸುವಂತಾಗಬೇಕು ಎಂದು ಹೇಳಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫಾ ಮಾತನಾಡಿ ದೇಶದಲ್ಲಿ ಸಾಮಾಜಿಕ ಕ್ರಾಂತಿಯನ್ನು ಹುಟ್ಟು ಹಾಕಿದವರು ನಾರಾಯಣ ಗುರುಗಳು. ದೈವಾಂಶ ಸಂಭೂತರಾಗಿ ಜನಿಸಿ ಸಮಾಜದಲ್ಲಿ ಸುಧಾರಣೆಯೊಂದಿಗೆ ಆಧ್ಯಾತ್ಮಿಕ ಚಿಂತನೆಯನ್ನು ನೀಡಿದವರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸುಳ್ಯ ತಹಸೀಲ್ದಾರ್ ಮಂಜುಳ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್, ಸುಳ್ಯ ಸಿ.ಎ.ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಸುದರ್ಶನ್ ಮಾತನಾಡಿದರು. ನಗರ ಪಂಚಾಯಿತಿ ಸದಸ್ಯರು, ತಾಲೂಕು ಕಚೇರಿ ಸಿಬ್ಬಂದಿಗಳು, ಬಿಲ್ಲವ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಉಪ ತಹಸೀಲ್ದಾರ್ ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವ ಸಂಘದ ಪ್ರ.ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ ವಂದಿಸಿದರು.

























