Home ಜಿಲ್ಲೆ ಮೈಸೂರು ನಾಯಕ ಸಮುದಾಯಕ್ಕೆ ಅನ್ಯಾಯವಾದರೆ ರಾಜ್ಯವ್ಯಾಪಿ ಹೋರಾಟ: ತಾಯೂರು ಪ್ರಕಾಶ್ ಎಚ್ಚರಿಕೆ

ನಾಯಕ ಸಮುದಾಯಕ್ಕೆ ಅನ್ಯಾಯವಾದರೆ ರಾಜ್ಯವ್ಯಾಪಿ ಹೋರಾಟ: ತಾಯೂರು ಪ್ರಕಾಶ್ ಎಚ್ಚರಿಕೆ

ಸಂಜೆವಾಣಿ ವಾರ್ತೆ
ತಿ.ನರಸೀಪುರ.ಫೆ.27:-
ವಿಶ್ವ ವಿದ್ಯಾನಿಲಯವನ್ನು ಏಕ ಘಟಕವಾಗಿ ಪರಿಗಣಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವ ಹಿನ್ನೆಲೆ­ಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಮೈಸೂರು ಜಿಲ್ಲಾ ಅಧ್ಯಕ್ಷ ಹಾಗೂ ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ತಾಯೂರ್ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಉಪ ಸಮಿತಿ ಸಭೆಯಲ್ಲಿ ವಿಶ್ವವಿದ್ಯಾನಿಲಯವನ್ನು ಏಕ ಘಟಕವಾಗಿ ಪರಿಗಣಿಸುವ ಬಗ್ಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂಬ ಮಾಹಿತಿ ಆತಂಕಕಾರಿ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.


ಸುಪ್ರೀಂ ಕೋರ್ಟ್ ಹಾಗೂ ಅಲಹಾಬಾದ್ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಅವರು, ವಿಶ್ವವಿದ್ಯಾನಿಲಯದ ಭೋಧಕ ಹುದ್ದೆಗಳ ಮೀಸಲಾತಿಯನ್ನು ಒಟ್ಟು ಸೀಟುಗಳ ಆಧಾರದಲ್ಲಿ ಅಲ್ಲದೆ, ವಿಭಾಗವಾರು ಲೆಕ್ಕ ಹಾಕಬೇಕು ಎಂದು ನ್ಯಾಯಾಲಯಗಳು ಸ್ಪಷ್ಟಪಡಿಸಿವೆ. ವಿಶ್ವವಿದ್ಯಾನಿಲಯವನ್ನು ಒಂದೇ ಘಟಕವಾಗಿ ಪರಿಗಣಿಸಿ ನೇಮಕಾತಿ ನಡೆಸಿದರೆ ಅದು ಸಂವಿಧಾನದ 14 ಮತ್ತು 15ನೇ ವಿಧಿಗಳಿಗೆ ವಿರುದ್ಧವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಆ ತೀರ್ಪನ್ನು ಸುಪ್ರೀಂ ಕೋರ್ಟ್ ಸಹ ಎತ್ತಿಹಿಡಿದಿದೆ ಎಂದು ಅವರು ತಿಳಿಸಿದರು.


ಪ್ರಸ್ತುತ ರೋಸ್ಟರ್ ಪ್ರಕಾರ ಒಂದು ಹುದ್ದೆ ಪರಿಶಿಷ್ಟ ಜಾತಿಗೆ, ಮತ್ತೊಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸಂದರ್ಭದಲ್ಲೇ, ಏಕ ಘಟಕ ವ್ಯವಸ್ಥೆ ಜಾರಿಗೆ ಬಂದರೆ ನಾಯಕ ಸಮುದಾಯದ ವಿದ್ಯಾವಂತರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ತಾಯೂರು ಪ್ರಕಾಶ್ ಆತಂಕ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಕ್ರಮವಾಗುತ್ತದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಸಮುದಾಯದ ಹಕ್ಕುಗಳಿಗೆ ಧಕ್ಕೆಯಾಗದಂತೆ ನ್ಯಾಯಸಮ್ಮತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರಲ್ಲದೆ, ನಾಯಕ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆದರೆ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.