
ಬೆಂಗಳೂರು. ಡಿ. ೧- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಬ್ರದರ್ಸ್ ಥರ ಇದ್ದೀವಿ, ಅದೇ ರೀತಿಯ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪು ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.
ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯನವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜತೆಗೆ ಬ್ರೇಕ್ ಪಾಸ್ಟ್ ಸಭೆ ನಮ್ಮಿಬ್ಬರಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರೂ ಬ್ರದರ್ಸ್ ಥರ ಇದ್ದೀವಿ ಎಂದರು.
ನಿಮ್ಮ ಒತ್ತಡಕ್ಕೆ ಬ್ರೇಕ್ ಫಾಸ್ ಅಲ್ಲ, ನಮಗೇನು ಅಗತ್ಯ ಇಲ್ಲ ಎಂದು ಮಾಧ್ಯಮದವರನ್ನು ಉದ್ದೇಶಿಸಿ ಹೇಳಿದ ಅವರು, ನಮ್ಮಲ್ಲಿ ಯಾವುದೇ ಗುಂಪು ಇಲ್ಲ. ೧೪೦ ಶಾಸಕರದ್ದೆಲ್ಲಾ ಒಂದೇ ಗುಂಪು ಎಂದರು.
ನಾವು ಹುಟ್ಟುವಾಗ ಒಬ್ಬರೇ, ಸಾಯುವಾಗಲೂ ಒಬ್ಬರೇ. ಹಾಗಾಗಿ ಗುಂಪು ಏಕೆ ಬೇಕು. ನೀವೆಲ್ಲಾ ಏನೇನೋ ತೋರಿಸುತ್ತಿದ್ದೀರಿ, ಸಿದ್ದರಾಮಯ್ಯ ಗುಂಪು, ಡಿಕೆಶಿ ಗುಂಪು ಎಂದೆಲ್ಲಾ. ನಮ್ಮಲ್ಲಿ ಯಾವುದೇ ರೀತಿಯ ಅಂತಹ ಗುಂಪು ಇಲ್ಲ ಎಂದು ಪುನರುಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದರು. ಎಸ್.ಎಂ. ಕೃಷ್ಣ ವಿಕಾಸಸೌಧ ಕಟ್ಟಿದರು. ಕೆಂಪೇಗೌಡರು ಬೆಂಗಳೂರನ್ನೇ ನಿರ್ಮಿಸಿದರು. ಇವರೆಲ್ಲಾ ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದಾರೆ. ಯಾರೇ ಆಗಲೀ ಅಧಿಕಾರ ಸಿಕ್ಕಿದಾಗ ಇಂತಹ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು. ನಾವು ಕೂಡಾ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ವಿರುದ್ಧ ಮತ್ತೆ ಎಫ್‌ಐಆರ್ ದಾಖಲಿಸಿರುವುದು ಸರಿಯಲ್ಲ. ಕಿರುಕುಳಕ್ಕೂ ಒಂದು ಮಿತಿ ಇರುತ್ತದೆ. ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

























