
ಕೆಂಗೇರಿ, ನ. ೩ : ಕನ್ನಡ ನೆಲ, ಜಲ,ಭಾಷೆಗೆ ಕಂಟಕ ಎದುರಾದಾಗ ಸ್ವಾಭಿಮಾನಿ ಕನ್ನಡಿಗರು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ನಾಡಿನ ಹಿತಕ್ಕಾಗಿ ಬದ್ಧತೆ ತೋರಬೇಕೆಂದು ವಿಧಾನಪರಿಷತ್ ಸದಸ್ಯ ಟಿ. ಎನ್. ಜವರಾಯಿಗೌಡ ಕರೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ -ಸೂಲಿವಾರ ಕಣಿವೆ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶುದ್ಧ ಕುಡಿಯುವ ನೀರು ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ದಲ್ಲಿ ವಾಸ ಮಾಡುವ ಅನ್ಯ ಭಾಷಿಕರು ಕನ್ನಡ ಭಾಷೆಯನ್ನು ಕಲಿತು ವ್ಯವಹರಿಸುವ ಮೂಲಕ ನಮ್ಮ ಸಂಸ್ಕೃತಿ ಪರಂಪರೆ ಇತಿಹಾಸದ ಬಗ್ಗೆ ಅರಿವು ಮೂಡಿಸಿಕೊಂಡು ಈ ನೆಲದ ಋಣ ತೀರಿಸಬೇಕೆಂದರು.
ಭಾಷೆ, ನೆಲ, ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ ಯಾಗಬೇಕಾಗಿದೆ , ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಎಂಬ ವಿಚಾರಕ್ಕೆ ಎಂತಹದ್ದೇ ತ್ಯಾಗಕ್ಕೆ ಸಿದ್ಧ ಎಂದರು.
ಜೆಡಿಎಸ್ ಯುವ ಮುಖಂಡ ವಿನೋದ್ ಗೌಡ ಮಾತನಾಡಿ ಬಡವರು,ಮಧ್ಯಮ ವರ್ಗದವರು ಹೆಚ್ಚಾಗಿ ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುವ ಕಡೆಗೆ ಸರ್ಕಾರ ಆದ್ಯತೆ ನೀಡಿ ಕಾರ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದರು. ಸೂಲಿವಾರ ಸಮೀಪದ ಕಣಿವೆ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಧಾನಪರಿಷ ಸದಸ್ಯ ಟಿ.ಎನ್. ಜವರಾಯಿಗೌಡ ಅವರ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.
ಚಿಕ್ಕನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸೂಲಿವಾರ ಬಸವರಾಜು, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಪಾರ್ವತಿ ಚಂದ್ರಪ್ಪ, ಜೆಡಿಎಸ್ ಮುಖಂಡರಾದ ಕೃಷ್ಣೆಗೌಡ, ರಾಮ್ ಕುಮಾರ್ ರಾಜ್ ಗೌಡ, ಕೊಡಪ್ಪ ಜೆಡಿಎಸ್ ಮುಖಂಡರು ಕಾರ್ಯಕರ್ತರು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು






























