
ಪುತ್ತೂರು: ಗೋವುಗಳೇ ಜಗತ್ತಿಗೆ ಶ್ರೀನಿವಾಸನನ್ನು ತೋರಿಸಿಕೊಟ್ಟ ಕಾರಣ ಪುತ್ತೂರಿನಲ್ಲಿ ೧೦ ಎಕರೆ ಜಾಗದಲ್ಲಿ ಗೋಶಾಲೆ ನಿರ್ಮಾಣ ಮಾಡಬೇಕು. ಇದರ ಜತೆಗೆ ಸಮಾಜವನ್ನು ಒಗ್ಗೂಡಿಸುವ ಸಂಕಲ್ಪ ಮಾಡಬೇಕು. ನಾಡಿಗೆ ಉತ್ತಮ ಭವಿಷ್ಯ ರೂಪಣೆಯಾಗಬೇಕಾದರೆ ಹಿಂದೂ ಸಮಾಜ ಒಗ್ಗಟ್ಟಾಬೇಕಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ೩ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವದ ಹಿಂದವೀ ಸಾಮ್ರಾಜ್ಯೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಸುಬ್ರಹ್ಮಣ್ಯ ನರಸಿಂಹ ಸಂಪುಟದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಿ ಕೊಡುವ ಕೆಲಸವಾಗಬೇಕು. ಇಲ್ಲದಿದ್ದರೆ ಮಕ್ಕಳು ದಾರಿ ತಪ್ಪುತ್ತಾರೆ. ಅತಿಯಾದ ಸಾಮಾಜಿಕ ಜಾಲತಾಣ ಬಳಕೆಯೂ ಯುವ ಜನಾಂಗಕ್ಕೆ ಮಾರಕ ಎಂದರು. ಅರಕಲಗೂಡು ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಹಿಂದು ಸಂಸ್ಕೃತಿ ಪಾಶ್ಚಾತ್ಯ ಸಂಸ್ಕೃತಿಯ ಕಡೆ ವಾಲುತ್ತಿದೆ. ಸನಾತನ ಸಂಸ್ಕೃತಿಯನ್ನು ಕಾಪಾಡುವ ಕೆಲಸವಾಗಬೇಕು ಎಂದರು. ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯ ಅಶೀರ್ವಚನ ನೀಡಿ, ಎಲ್ಲ ಸನ್ಯಾಸಿಗಳು ಪುತ್ತೂರಿನಲ್ಲಿ ಸೇರಿ ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಶುಭ ಸಂಕೇತ. ಶ್ರೀನಿವಾಸ ಕಲ್ಯಾಣದಿಂದ ನಮ್ಮ ಜೀವನದ ಉನ್ನತಿಯಾಗಲಿ ಎಂದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಧಾರ್ಮಿಕತೆಯ ಅರಿವು ಕಡಿಮೆಯಾಗುತ್ತಿದೆ. ಇದರಿಂದ ಸಂಬಂಧಗಳು ಕೂಡ ಮುರಿದು ಬೀಳುತ್ತಿವೆ. ಶ್ರೀನಿವಾಸ ಕಲ್ಯಾಣೋತ್ಸವ ಭಕ್ತಿಯ ಜತೆ ಒಗ್ಗಟ್ಟು, ಸಂಸ್ಕೃತಿ, ಸಂಸ್ಕಾರವನ್ನೂ ಕಲಿಸುತ್ತದೆ. ಅರುಣ್ ಕುಮಾರ್ ಪುತ್ತಿಲ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಈ ಕಾರ್ಯಕ್ರಮದಲ್ಲಿ ಹಿಂದವಿ ಸಾಮ್ರಾಜ್ಯದ ನೆಲೆ ಅನಾವರಣಗೊಂಡಿದೆ. ಮತಾಂತರ, ಡ್ರಗ್ಸ್ ಮಾಪಿಯ, ವಿವಾಹ ವಿಚ್ಚೇಧನ, ತಾಯಂದಿರ ಕಣ್ಣೀರು, ಗೋವಿನ ರೋದನ ಕಲಿಯುಗದಲ್ಲಿ ಹೆಚ್ಚಾಗಿದೆ. ನಾವು ಯೋಚನೆ ಮಾಡಬೇಕಾಗಿದೆ ಎಂದರು. ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸನಾತನ ಧರ್ಮಕ್ಕೆ ಚ್ಯುತಿ ಬಂದಾಗ ನಾವು ಎದುರಿಸಲು ಧರ್ಮ ಗ್ರಂಥಗಳ ಅಧ್ಯಯನ ಮಾಡಬೇಕು. ಅದರಿಂದ ಸ್ಪೂರ್ತಿ ಪಡೆಯಬೇಕು ಎಂದರು. ಕನ್ಯಾನದ ಶ್ರೀಕ್ಷೇತ್ರ ಕಣಿಯೂರು ಮಠದ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ, ಸಂಘಟನೆ ಮಾಡಲು ಭಗೀರಥ ಪ್ರಯತ್ನ ಬೇಕು. ಅದನ್ನು ಅರುಣ್ ಕುಮಾರ್ ಪುತ್ತಿಲ ಮಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳು ರಾಷ್ಟ್ರದ ಉಳಿವಿಗೆ ಕಾರಣವಾದಿತು ಎಂದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ವಹಿಸಿದ್ದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಭಾಷಣ ಮಾಡಿದರು. ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಕೇಶವಪ್ರಸಾದ್ ಮುಳಿಯ, ದಿವಾಕರ ದಾಸ್ ನೇರ್ಲಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಕಲ್ಯಾಣೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ಸ್ವಾಗತ ಸಮಿತಿ ಸಹ ಸಂಚಾಲಕ ಅನಿಲ್ ತೆಂಕಿಲ, ವೆಂಕಟ್ರಮಣ ಕಡಬ, ಸ್ವಾಗತ ಸಮಿತಿ ಕಾರ್ಯದರ್ಶಿ ಮನೀಶ್ ಕುಲಾಲ್, ಪ್ರೇಮ್‌ರಾಜ್ ವೇದಿಕೆಯಲ್ಲಿದ್ದರು. ಉಮೇಶ್ ಕೋಡಿಬೈಲು ಸ್ವಾಗತಿಸಿ, ರವಿ ಕುಮಾರ್ ರೈ ಕೆದಂಬಾಡಿ ಮಠ ವಂದಿಸಿದರು. ಪ್ರದೀಪ್ ಬಡೆಕ್ಕಿಲ ಮತ್ತು ನವೀನ್ ರೈ ಪಂಜಳ ಕಾರ್ಯಕ್ರಮ ನಿರೂಪಿಸಿದರು.




























