ನಾಗರಿಕರ ಸಮಸ್ಯೆಗೆ ದನಿಯಾದ ಸಿಎಂ ಕಚೇರಿ

ಶಿವಮೊಗ್ಗ, ಅ. ೧೩: ಪ್ರಸ್ತುತ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಜೀವನದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ, ವ್ಯಾಪಕ ಮಹತ್ವ ಪಡೆದುಕೊಂಡಿವೆ. ನಾಗರಿಕರ ಅಭಿವ್ಯಕ್ತಿಯ ಪರಿಣಾಮಕಾರಿ ವೇದಿಕೆಗಳಾಗುತ್ತಿವೆ.


ಜೊತೆಗೆ ಆಡಳಿತ ವ್ಯವಸ್ಥೆ ಸಂಪರ್ಕಕ್ಕೂ ಸುಲಭ ಮಾರ್ಗಗಳಾಗುತ್ತಿವೆ.ಆಡಳಿತಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ, ನಾಗರೀಕರಿಗೆ ಹಲವು ರೀತಿಯ ಸೇವೆ ಕಲ್ಪಿಸುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಆನ್ಲೈನ್ ಆಧಾರಿತವಾಗಿ ಸಾರ್ವಜನಿಕರು ತಾವು ಇರುವ ಸ್ಥಳದಿಂದಲ್ಲೇ ದೂರು ದಾಖಲಿಸುವ ಪ್ರತ್ಯೇಕ ವ್ಯವಸ್ಥೆ ಮಾಡಿದೆ.

ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಕೂಡ, ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರು ವ್ಯಕ್ತಪಡಿಸುವ ಕುಂದುಕೊರತೆ ಪರಿಹಾರಕ್ಕೆ ಪ್ರತ್ಯೇಕ ವಿಭಾಗ ತೆರೆದಿದೆ.ಸದರಿ ವಿಭಾಗವು ತನ್ನ ತ್ವರಿತಗತಿಯ ಕಾರ್ಯನಿರ್ವಹಣೆ ಮೂಲಕ, ರಾಜ್ಯದ ವಿವಿಧೆಡೆಯ ಮೂಲಸೌಕರ್ಯ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುತ್ತಿದೆ.

ಇದು ನಾಗರೀಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಸಾಮಾಜಿಕ ಜಾಲತಾಣದ ಮೂಲಕ, ನಾಗರೀಕರು ಸಲ್ಲಿಸುವ ಮೂಲಸೌಕರ್ಯ ಸೇರಿದಂತೆ ನಾನಾ ರೀತಿಯ ಅಹವಾಲುಗಳಿಗೆ, ಸಿಎಂ ಕಚೇರಿ ಕುಂದುಕೊರತೆ ವಿಭಾಗವು ಸಮರೋಪಾದಿಯಲ್ಲಿ ಸ್ಪಂದಿಸುತ್ತಿದೆ. ಸಂಬಂಧಿಸಿದ ಜಿಲ್ಲಾ ಕೇಂದ್ರಗಳ ಇಲಾಖೆಗಳನ್ನು ನೇರವಾಗಿ ಸಂಪರ್ಕಿಸಿ ದೂರಿನ ಸತ್ಯಾಸತ್ಯತೆ ಪರಿಶೀಲಿಸುತ್ತಿದೆ. ನಂತರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತಿದೆ.

ದಕ್ಷ ತಂಡ : ಸಿಎಂ ಕಚೇರಿ ಕುಂದುಕೊರತೆ ವಿಭಾಗದ ಖಡಕ್ ಕಾರ್ಯನಿರ್ವಹಣೆಯು, ಜಿಲ್ಲಾ ಕೇಂದ್ರಗಳಲ್ಲಿನ ಆಡಳಿತ ವ್ಯವಸ್ಥೆ ಚುರುಕುಗೊಳ್ಳುವಂತೆ ಮಾಡಿದೆ. ಸಿಎಂ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಅಧಿಕಾರಿಯಾಗಿರುವ ಡಾ. ವೈಷ್ಣವಿ ಮತ್ತವರ ಸಿಬ್ಬಂದಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆ ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿದೆ.